ತಿರುವನಂತಪುರಂ: ಕೋವಿಡ್ ಪ್ರಕರಣಗಳು ಆತಂಕಕಾರಿಯಾಗಿ ಹೆಚ್ಚಳಗೊಳ್ಳುತ್ತಿದೆ. ರಾಜ್ಯದಲ್ಲಿ ಮತ್ತೆರಡು ಸಾವು ದಾಖಲಾಗಿ ಆತಂಕಮೂಡಿಸಿದೆ.
ಮಂಗಳವಾರ 292 ಮಂದಿಗೆ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 2,041 ಕ್ಕೆ ಏರಿದೆ. ಮಂಗಳವಾರ ದೇಶದಲ್ಲಿ 341 ಜನರಿಗೆ ಕೋವಿಡ್ ದೃಢಪಟ್ಟಿದೆ. ಅದರಲ್ಲಿ ಸಿಂಹಪಾಲು ಕೇರಳದ್ದು ಎಂಬುದು ಆತಂಕಕಾರಿ.
ಪ್ರಸ್ತುತ ಹಬ್ಬ ಹರಿದಿನಗಳಾಗಿರುವುದರಿಂದ ನಗರಕ್ಕೆ ಬರುವವರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಸೂಚಿಸಿದೆ. ಸಾಮಾಜಿಕ ಅಂತರ ಮತ್ತು ವೈಯಕ್ತಿಕ ನೈರ್ಮಲ್ಯವನ್ನು ಅನುಸರಿಸಬೇಕು, ವಯಸ್ಕರು ಮತ್ತು ಮಕ್ಕಳು ಜನಸಂದಣಿ ಇರುವಲ್ಲಿ ಹೋಗುವುದನ್ನು ತಪ್ಪಿಸಬೇಕು, ಕೋವಿಡ್ ಮಾನದಂಡಗಳ ಪ್ರಕಾರ ಎಲ್ಲಾ ಜಿಲ್ಲೆಗಳಲ್ಲಿ ಪರೀಕ್ಷೆಗಳನ್ನು ಹೆಚ್ಚಿಸಬೇಕು, ಆಗಾಗ್ಗೆ ಜ್ವರ ಪೀಡಿತರ ಬಗ್ಗೆ ಕಾಳಜಿ ವಹಿಸಬೇಕು, ಸ್ವಯಂ-ಔಷಧಿಗಳನ್ನು ತಪ್ಪಿಸಬೇಕು ಮತ್ತು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕು, ಆರ್.ಟಿ.ಪಿ.ಸಿ.ಆರ್./ ಆಂಟಿಜೆನ್ ಪರೀಕ್ಷೆಗಳ ಸಂಖ್ಯೆ ಹೆಚ್ಚಿಸಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.
ಡಿಸೆಂಬರ್‍ನಲ್ಲಿ ತಣ್ಣನೆಯ ವಾತಾವರಣ ಮತ್ತು ಹವಾಮಾನದಲ್ಲಿನ ಬದಲಾವಣೆಗಳು ಜ್ವರ ಪ್ರಕರಣಗಳ ಹಠಾತ್ ಹೆಚ್ಚಳಕ್ಕೆ ಕಾರಣವಾಗಿದೆ. ರೋಗವಾಹಕ ಕೀಟಗಳು ಗಾಳಿಯಲ್ಲಿ ಹೆಚ್ಚು ಕಾಲ ಬದುಕಬಲ್ಲವು. 60 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಗಂಭೀರ ಕಾಯಿಲೆ ಇರುವವರು ವಿಶೇಷವಾಗಿ ಜಾಗರೂಕರಾಗಿರಬೇಕು. ಕೇರಳದಲ್ಲಿ ದೃಢಪಡಿಸಿದ ಜೆಎನ್-1 ಉಪ ತಳಿ ಪ್ರಕಾರವು ಹೆಚ್ಚು ಹರಡುತ್ತಿದೆ. ಆದರೆ ಮಾರಣಾಂತಿಕ ಅಲ್ಲ. ಸರಿಯಾದ ಶ್ರದ್ಧೆ ಮತ್ತು ಜಾಗರೂಕತೆ ಅತ್ಯಗತ್ಯ ಎಂದು ತಜ್ಞರು ಎಚ್ಚರಿಸಿದ್ದಾರೆ.