ನವದೆಹಲಿ: ಮೂರು ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಸೋಲಿನ ಬೆನ್ನಲ್ಲೇ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ವಿಶ್ವಾಸಾರ್ಹತೆಯನ್ನು ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಮಗದೊಮ್ಮೆ ಪ್ರಶ್ನೆ ಮಾಡಿದ್ದಾರೆ.
ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೀನಾಯ ಸೋಲು ಎದುರಾಗಿತ್ತು.
'ಚಿಪ್ ಹೊಂದಿರುವ ಯಾವುದೇ ಯಂತ್ರವನ್ನು ಹ್ಯಾಕ್ ಮಾಡಬಹುದು. 2003ರಿಂದಲೇ ಇವಿಎಂ ಮೂಲಕ ಮತದಾನವನ್ನು ನಾನು ವಿರೋಧಿಸುತ್ತಲೇ ಬಂದಿದ್ದೇನೆ' ಎಂದು ಕಾಂಗ್ರೆಸ್ ರಾಜ್ಯಸಭಾ ಸದಸ್ಯರಾಗಿರುವ ದಿಗ್ವಿಜಯ ಸಿಂಗ್ ಹೇಳಿದ್ದಾರೆ.
'ಭಾರತೀಯ ಪ್ರಜಾಪ್ರಭುತ್ವವನ್ನು ವೃತ್ತಿಪರ ಹ್ಯಾಕರ್‌ಗಳಿಂದ ನಿಯಂತ್ರಿಸಲು ಅನುಮತಿಸಬಹುದೇ! ಇದು ಎಲ್ಲ ರಾಜಕೀಯ ಪಕ್ಷಗಳು ಗಮನಹರಿಸಬೇಕಾದ ಮೂಲಭೂತ ಪ್ರಶ್ನೆಯಾಗಿದೆ. ಚುನಾವಣಾ ಆಯೋಗ ಮತ್ತು ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯವು ದಯವಿಟ್ಟು ನಮ್ಮ ಭಾರತೀಯ ಪ್ರಜಾಪ್ರಭುತ್ವವನ್ನು ರಕ್ಷಿಸುವೀರಾ' ಎಂದು ಮನವಿ ಮಾಡಿದ್ದಾರೆ.
ಹಿಂದೆ ಇವಿಎಂ ಬಳಕೆಯನ್ನು ಬಿಜೆಪಿ ವಿರೋಧಿಸಿರುವ ಸುದ್ದಿಯನ್ನು ದಿಗ್ವಿಜಯ ಸಿಂಗ್ ಹಂಚಿಕೊಂಡಿದ್ದಾರೆ. ಮಗದೊಂದು ಪೋಸ್ಟ್‌ನಲ್ಲಿ ಜಾಗತಿಕವಾಗಿ ಇವಿಎಂ ಬಳಕೆ ಮಾಡುತ್ತಿರುವ ರಾಷ್ಟ್ರಗಳು, ಬಳಕೆ ಮಾಡದ ದೇಶಗಳು ಮತ್ತು ಒಟ್ಟಾರೆ ವೆಚ್ಚದ ಕುರಿತು ಮಾಹಿತಿ ನೀಡಿದ್ದಾರೆ.
ಆದರೆ ದಿಗ್ವಿಜಯ ಸಿಂಗ್ ಹೇಳಿಕೆಯನ್ನು ಬಿಜೆಪಿ ನಾಯಕ ರಜನೀಶ್ ಅಗರವಾಲ್ ತಳ್ಳಿ ಹಾಕಿದ್ದಾರೆ. 'ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಭಾರತ್ ಜೋಡೊ ಯಾತ್ರೆ ಹಾಗೂ ಕೆಟ್ಟ ನೀತಿಗಳಿಂದಾಗಿ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಸೋಲು ಎದುರಾಗಿದೆ. ಇದರ ಬದಲು ಇಎಂವಿ ಅನ್ನು ದೂರುತ್ತಿದೆ. ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಲು ತಯಾರಿಲ್ಲ' ಎಂದು ತಿರುಗೇಟು ನೀಡಿದ್ದಾರೆ.