ಚೆನ್ನೈ: ಬ್ಲಾಕ್ ಫಂಗಸ್‌ನಿಂದ (ಕಪ್ಪು ಶಿಲೀಂಧ್ರ) ಬಳಲುತ್ತಿರುವವರಿಗೆ ಲೋಹದ 'ತ್ರಿಡಿ' ಮುದ್ರಿತ ಇಂಪ್ಲಾಂಟ್ ಅನ್ನು ಭಾರತೀಯ ತಂತ್ರಜ್ಞಾನ ಸಂಸ್ಥೆ-ಮದ್ರಾಸ್ (ಐಐಟಿ-ಎಂ) ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ನಂತರ ಬ್ಲಾಕ್ ಫಂಗಸ್‌ನಿಂದ ಬಳಲುತ್ತಿರುವವರ ಸಂಖ್ಯೆ ಏರಿಕೆಯಾಗಿದೆ.
'ಮ್ಯೂಕೋರ್ಮಿಕೋಸಿಸ್' ಎಂದೂ ಕರೆಯಲ್ಪಡುವ ಶಿಲೀಂಧ್ರವು ಸಾಮಾನ್ಯವಾಗಿ ಮುಖದ ಅಂಗಾಂಶಗಳನ್ನು ಆಕ್ರಮಿಸಿಕೊಂಡು, ವಿರೂಪಗೊಳಿಸುತ್ತದೆ. ತೀವ್ರ ಸ್ವರೂಪದ ಪ್ರಕರಣಗಳಲ್ಲಿ ರೋಗಿಗಳ ಮೂಗು, ಕಣ್ಣು ಅಥವಾ ಸಂಪೂರ್ಣ ಮುಖಕ್ಕೆ ಹಾನಿಯಾದ ನಿದರ್ಶನಗಳಿವೆ. ಕೋವಿಡ್-19 ಸಾಂಕ್ರಾಮಿಕದ ನಂತರ ಸುಮಾರು 60 ಸಾವಿರ ಭಾರತೀಯರು ಕಪ್ಪು ಶಿಲೀಂಧ್ರ ಸಮಸ್ಯೆ ಎದುರಿಸುತ್ತಿರುವ ವರದಿ ಇದೆ. ಇಂತಹ ಸನ್ನಿವೇಶದಲ್ಲಿ ಈ ಹೊಸ ತಂತ್ರಜ್ಞಾನವು ಅಂತಹವರ ಪಾಲಿಗೆ ಒಂದಿಷ್ಟು ಭರವಸೆಯ ಬೆಳಕನ್ನೂ ಮೂಡಿಸಿದೆ.
ಚೆನ್ನೈನ ದಂತ ಶಸ್ತ್ರಚಿಕಿತ್ಸರೊಬ್ಬರ ನವೋದ್ಯಮ 'ಝೋರಿಯೊಎಕ್ಸ್ ಇನ್ನೋವೇಶನ್ ಲ್ಯಾಬ್ಸ್' ಸಹಭಾಗಿತ್ವದಲ್ಲಿ ಐಐಟಿಎಂ ಸಂಶೋಧಕರು ಲೋಹ ತ್ರಿಡಿ ಮುದ್ರಿತ ಇಂಪ್ಲಾಂಟ್ ಅನ್ನು ರೋಗಿಗಳಿಗೆ ಅಳವಡಿಸುವ ಕಾರ್ಯವನ್ನು ಕೈಗೊಳ್ಳುವ ಯೋಜನೆ ರೂಪಿಸಿದ್ದಾರೆ. ಈ ನವೋದ್ಯಮ ಸಂಸ್ಥೆಯು ಶಸ್ತ್ರಚಿಕಿತ್ಸೆ ನಿಭಾಯಿಸಿದರೆ, ಐಐಟಿಎಂ 3ಡಿ ವಿನ್ಯಾಸ ಮತ್ತು ಮುದ್ರಣವನ್ನು ನಿರ್ವಹಿಸಲಿದೆ.
ಆರ್ಥಿಕವಾಗಿ ದುರ್ಬಲ ವರ್ಗದ ರೋಗಿಗಳಿಗೆ ಲೋಹದ 3ಡಿ ಮುದ್ರಿತ ಸುಮಾರು 50 ಇಂಪ್ಲಾಂಟ್‌ಗಳನ್ನು ಈಗಾಗಲೇ ಅಳವಡಿಸಲಾಗಿದೆ. ದುಬಾರಿ ಇಂಪ್ಲಾಂಟ್‌ಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗದ ರೋಗಿಗಳನ್ನು ಗುರುತಿಸಿ, ಅವರಿಗೆ ಈ ಇಂಪ್ಲಾಂಟ್‌ಗಳನ್ನು ಉಚಿತವಾಗಿ ಅಳವಡಿಸುವ ಸಲುವಾಗಿ ರೈಟ್2ಫೇಸ್ (#Right2Face) ಅಭಿಯಾನವನ್ನು ನಡೆಸಲಾಗುತ್ತಿದೆ.
ಕಪ್ಪು ಶಿಲೀಂಧ್ರ ಸಮಸ್ಯೆಯಿಂದ ಬಳಲುತ್ತಿರುವ ಬಡ ಮತ್ತು ಅಗತ್ಯವಿರುವ ರೋಗಿಗಳಿಗೆ ನೆರವಾಗುವ ಉದ್ದೇಶವನ್ನು ರೈಟ್2ಫೇಸ್ ಉಪಕ್ರಮವು ಹೊಂದಿದೆ.