ನವದೆಹಲಿ: ಸಂಸತ್ ದಾಳಿಯ 22ನೇ ವಾರ್ಷಿಕೋತ್ಸವದಂದೆ ಲೋಕಸಭೆಯಲ್ಲಿ ಪ್ರಮುಖ ಭದ್ರತಾ ಲೋಪ ನಡೆದ ಪ್ರಕರಣಕ್ಕೆ ಒಟ್ಟು ಆರು ಆರೋಪಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಈ ಪ್ರಕರಣ ಸಂಬಂಧ ಮೊದಲು ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ದೆಹಲಿ ಪೊಲೀಸರು ಪುರುಷ ಮತ್ತು ಮಹಿಳೆ ಇಬ್ಬರನ್ನೂ ಸಂಸತ್ ಭವನದ ಮುಂದೆ ಬಂಧಿಸಿದ್ದರೆ ಮತ್ತಿಬ್ಬರು ಸಂಸತ್ತಿನ ಒಳಗೆ ಬಂಧಿಸಲಾಗಿದೆ ಎಂದು ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ (ನವದೆಹಲಿ) ಪ್ರಣವ್ ತಾಯಲ್ ಖಚಿತಪಡಿಸಿದ್ದಾರೆ.
ಸಂಸತ್ತಿನ ಹೊರಗೆ ಬಂಧಿಸಿದವರನ್ನು ಸಂಸತ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಕರೆದೊಯ್ದ ವಿಚಾರಣೆ ನಡೆಸಿದ್ದು ಅವರು ಹರಿಯಾಣದ ಹಿಸಾರ್ ನಿವಾಸಿ ನೀಲಂ (42) ಮತ್ತು ಮಹಾರಾಷ್ಟ್ರದ ಲಾತೂರ್ ನಿವಾಸಿ ಅಮೋಲ್ ಶಿಂಧೆ (25) ಎಂದು ಗುರುತಿಸಲಾಗಿದೆ. ಮತ್ತಿಬ್ಬರನ್ನು ಉತ್ತರ ಪ್ರದೇಶದ ಸಾಗರ್ ಶರ್ಮಾ ಮತ್ತು ಮೈಸೂರಿನ ಮನೋರಂಜನ್ ಎಂದು ತಿಳಿದುಬಂದಿದೆ.
ವಿಕ್ಕಿ ಶರ್ಮಾ ಮತ್ತು ಆತನ ಪತ್ನಿಯನ್ನು ಹರಿಯಾಣದ ಹಿಸ್ಸಾರ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಗುರುಗ್ರಾಮದಲ್ಲಿ ತಂಗಿದ್ದು ಕಳೆದ ಮೂರು ತಿಂಗಳಿನಿಂದ ತಯಾರಿ ನಡೆಸಿದ್ದರು ಎಂದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.