ಮುಂಬೈ: ಕೆಲ ದಿನಗಳ ಹಿಂದೆ ಟೊಮ್ಯಾಟೋ ಮತ್ತು ಈರುಳ್ಳಿ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಇದೀಗ ಬೆಳ್ಳುಳ್ಳಿ ದರ ಏರಿಕೆಯ ಬಿಸಿ ತಟ್ಟಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ 300 ರಿಂದ 400 ರೂ. ತಲುಪಿದ್ದು, ಒಗ್ಗರಣೆ ಹಾಕುಲು ಜನರು ಹಿಂದೇಟು ಹಾಕುವಂತಾಗಿದೆ.
ಅಂದಹಾಗೆ ಬೆಳ್ಳುಳ್ಳಿಯನ್ನು ಮಹಾರಾಷ್ಟ್ರದ ನಾಸಿಕ್ ಮತ್ತು ಪುಣೆ ಜಿಲ್ಲೆಗಳಲ್ಲಿ ಪ್ರಧಾನವಾಗಿ ಬೆಳೆಯಲಾಗುತ್ತದೆ. ಈ ಪ್ರದೇಶದಲ್ಲಿ ಪ್ರತಿಕೂಲ ವಾತಾವರಣ ಕಾರಣದಿಂದಾಗಿ ಬೆಳ್ಳುಳ್ಳಿ ಉತ್ಪಾದನೆಯಲ್ಲಿ ಭಾರಿ ಕುಸಿತ ಕಂಡಿದೆ. ಹೀಗಾಗಿ ಮುಂಬೈ ಸಗಟು ವ್ಯಾಪಾರಿಗಳು ನೆರೆಯ ರಾಜ್ಯಗಳಾದ ಗುಜರಾತ್, ಮಧ್ಯಪ್ರದೇಶ ಮತ್ತು ರಾಜಸ್ಥಾನದಿಂದ ಬೆಳ್ಳುಳ್ಳಿಯನ್ನು ಖರೀದಿ ಮಾಡುತ್ತಿದ್ದು, ಸಾಗಾಟ ವೆಚ್ಚ ಮತ್ತು ಇತರೆ ಸ್ಥಳೀಯ ಸುಂಕಗಳನ್ನು ಏರಿಕೆ ಮಾಡಿರುವುದರಿಂದ ಬೆಳ್ಳುಳ್ಳಿ ಬೆಲೆಯಲ್ಲಿ ಭಾರಿ ಏರಿಕೆ ಕಂಡಿದೆ.
ಕಳೆದ ಕೆಲವು ವಾರಗಳಿಗೆ ಹೋಲಿಕೆ ಮಾಡಿದರೆ, ಬೆಳ್ಳುಳ್ಳಿ ಬೆಲೆ ದ್ವಿಗುಣಗೊಂಡಿದೆ. ಅದಕ್ಕೆ ಕಾರಣ ಕಡಿಮೆ ಪೂರೈಕೆ. ಮುಂಬೈನ ವಾಶಿಯಲ್ಲಿರುವ ಎಪಿಎಂಸಿ ಯಾರ್ಡ್ನ ವ್ಯಾಪಾರಸ್ಥರು, ಪರಿಸ್ಥಿತಿ ಶೀಘ್ರದಲ್ಲೇ ಸುಧಾರಿಸುವುದಿಲ್ಲ ಎಂದು ಹೇಳಿದ್ದಾರೆ. ಪ್ರಸ್ತುತ ಎಪಿಎಂಸಿ ಸಗಟು ಮಾರುಕಟ್ಟೆಗಳಲ್ಲಿ ಪ್ರತಿ ಕೆಜಿಗೆ 150 ರಿಂದ 250 ರೂ.ನಂತೆ ಬೆಳ್ಳುಳ್ಳಿ ಮಾರಾಟವಾಗುತ್ತಿದೆ. ಒಂದು ತಿಂಗಳ ಹಿಂದಷ್ಟೇ ಕೆಜಿಗೆ 100-150 ರೂ. ಇತ್ತು.
ಪ್ರಸ್ತುತ ದರ ಬದಲಾವಣೆಯಿಂದ ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಕೆಜಿಗೆ 300 ರಿಂದ 400 ರೂಪಾಯಿಗೆ ಮಾರಾಟವಾಗುತ್ತಿದ್ದು, ಗ್ರಾಹಕರನ್ನು ಕಂಗಾಲಾಗಿಸಿದೆ. ಪ್ರಸ್ತುತ ಸಗಟು ಮಾರುಕಟ್ಟೆಯಲ್ಲಿ ನಿತ್ಯವು 15 ರಿಂದ 20 ವಾಹನಗಳು (ಟ್ರಕ್ಸ್ ಮತ್ತು ಮಿನಿ ವ್ಯಾನ್ಗಳು) ಬರುತ್ತಿವೆ. ಈ ಮುಂಚೆ 25 ರಿಂದ 30 ವಾಹನಗಳು ಬರುತ್ತಿದ್ದವು. ದಕ್ಷಿಣದ ರಾಜ್ಯಗಳಿಂದ ಬರುವ ವಾಹನಗಳ ಸಂಖ್ಯೆಯು ಗಣನೀಯವಾಗಿದೆ ಇಳಿದಿದೆ.
ಊಟಿ ಮತ್ತು ಮಲಪ್ಪುರಂನಿಂದ ಬೆಳ್ಳುಳ್ಳಿ ಪೂರೈಕೆಯು ಗಣನೀಯವಾಗಿ ಕುಸಿದಿದ್ದು, ಇದು ಹಣದುಬ್ಬರಕ್ಕೆ ಕಾರಣವಾಗಿದೆ ಎಂದು ಎಪಿಎಂಸಿ ವರ್ತಕರು ತಿಳಿಸಿದ್ದಾರೆ. ಕಳೆದ ತಿಂಗಳಿಗೆ ಹೋಲಿಸಿದರೆ, ಈ ಸೀಸನ್ನಲ್ಲಿ ಬೆಳ್ಳುಳ್ಳಿ ಗರಿಷ್ಠ ಬೆಲೆಗೆ ಏರಿಕೆಯಾಗಿದ್ದು, ತಿಂಗಳ ಅಡುಗೆ ಬಜೆಟ್ ಅನ್ನು ಹೆಚ್ಚು ಮಾಡಲಿದೆ. ಮಾನ್ಸೂನ್ ಸಮಯದಲ್ಲಿ ಸಾಕಷ್ಟು ಮಳೆಯಾಗದ ಕಾರಣ ಮತ್ತು ನಂತರದ ಅಕಾಲಿಕ ಮಳೆಯಿಂದಾಗಿ ಉತ್ಪಾದನೆ ಕುಸಿದಿದ್ದು, ಸ್ಥಳೀಯ ಪೂರೈಕೆಗಾಗಿ ಗುಜರಾತ್, ರಾಜಸ್ಥಾನ ಮತ್ತು ಮಧ್ಯಪ್ರದೇಶವನ್ನು ಅವಲಂಬಿಸಬೇಕಾಗಿದೆ. ಇದು ದುಬಾರಿ ವ್ಯವಹಾರವಾಗಿದೆ ಎಂದು ಮುಂಬೈ ಎಪಿಎಂಸಿ ನಿರ್ದೇಶಕ ಅಶೋಕ್ ವಲುಂಜ್ ಹೇಳಿದರು.
ಹೊಸ ಬೆಳೆ ಮಾರುಕಟ್ಟೆಗೆ ಬರಲು ಸಮಯ ತೆಗೆದುಕೊಳ್ಳುತ್ತದೆ ಮತ್ತು ಅಲ್ಲಿಯವರೆಗೆ ಬೆಲೆಗಳು ಸಹ ಹೆಚ್ಚಾಗುವ ನಿರೀಕ್ಷೆಯಿದೆ. ದುರದೃಷ್ಟವಶಾತ್, ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಅಕಾಲಿಕ ಮಳೆಯಿಂದಾಗಿ ಅನೇಕ ಭಾಗಗಳಲ್ಲಿ ಬೆಳೆ ಹಾನಿಯಾಗಿದೆ.