ನವದೆಹಲಿ: 'ಎಜುಕೇಟ್ ಗರ್ಲ್ಸ್' ಸಂಸ್ಥೆಯ ಸ್ಥಾಪಕಿ ದೆಹಲಿಯ ಸಫೀನಾ ಹುಸೇನ್‌ರಿಗೆ, ಪ್ರತಿಷ್ಠಿತ 'ವೈಸ್' (ವರ್ಲ್ಡ್ ಇನ್ನೊವೇಷನ್ ಸಮ್ಮಿಟ್ ಫಾರ್ ಎಜುಕೇಷನ್) ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ಮೊತ್ತ ₹ 4.16 ಕೋಟಿ (5 ಲಕ್ಷ ಡಾಲರ್) ಆಗಿದೆ.
ನವದೆಹಲಿ: 'ಎಜುಕೇಟ್ ಗರ್ಲ್ಸ್' ಸಂಸ್ಥೆಯ ಸ್ಥಾಪಕಿ ದೆಹಲಿಯ ಸಫೀನಾ ಹುಸೇನ್‌ರಿಗೆ, ಪ್ರತಿಷ್ಠಿತ 'ವೈಸ್' (ವರ್ಲ್ಡ್ ಇನ್ನೊವೇಷನ್ ಸಮ್ಮಿಟ್ ಫಾರ್ ಎಜುಕೇಷನ್) ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ಮೊತ್ತ ₹ 4.16 ಕೋಟಿ (5 ಲಕ್ಷ ಡಾಲರ್) ಆಗಿದೆ.
ಭಾರತದ ವಿವಿಧ ಗ್ರಾಮಗಳಲ್ಲಿ ಶಾಲೆಯಿಂದ ಹೊರಗುಳಿದಿದ್ದ ಸುಮಾರು 14 ಲಕ್ಷ ಬಾಲಕಿಯರನ್ನು ಮತ್ತೆ ಶಿಕ್ಷಣದ ಮುಖ್ಯವಾಹಿನಿಗೆ ಕರೆತರುವುದರಲ್ಲಿ ಮಾಡಿರುವ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಕತಾರ್ ಫೌಂಡೇಷನ್ ಈ ಪ್ರಶಸ್ತಿಯನ್ನು ಸ್ಥಾಪಿಸಿದೆ. ಕೆಲ ದಿನಗಳ ಹಿಂದೆ ದೋಹಾದಲ್ಲಿ ನಡೆದಿದ್ದ 'ವೈಸ್'ನ 11ನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಸಫೀನಾ ಈ ಪ್ರಶಸ್ತಿಗೆ ಆಯ್ಕೆಯಾದ ಎರಡನೇ ಭಾರತೀಯರು. ಹಿಂದೆ, ನಿರ್ಲಕ್ಷ್ಯಿತ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಕಾರ್ಯಕ್ರಮಕ್ಕಾಗಿ 'ಪ್ರಥಮ್' ಸಹ ಸ್ಥಾಪಕ ಮಾಧವ್ ಚವಾಣ್ 2012ರಲ್ಲಿ ಈ ಪ್ರಶಸ್ತಿಗೆ ಭಾಜನರಾಗಿದ್ದರು.
'16 ವರ್ಷಗಳ ಹಿಂದೆ 'ಎಜುಕೇಟ್ ಗರ್ಲ್ಸ್' ಸಂಸ್ಥೆ ಸ್ಥಾಪಿಸಿದೆ. ಆಗಿನ್ನೂ 'ಬೇಟಿ ಬಚಾವೊ, ಬೇಟಿ ಪಡಾವೊ' ಇರಲಿಲ್ಲ. ಶಿಕ್ಷಣ ವಂಚಿತ ಬಾಲಕಿಯರನ್ನು ಶಿಕ್ಷಣದ ಮುಖ್ಯವಾಹಿನಿಗೆ ಕರೆತರುವುದೇ ಉದ್ದೇಶವಾಗಿತ್ತು' ಎಂದು ಸಫೀನಾ ಹೇಳಿದರು.
'ನಾವೀಗ 21ನೇ ಶತಮಾನದಲ್ಲಿದ್ದೇವೆ. ಆದರೆ, 'ಈಗಲೂ ಕುರಿಗಳು ಆಸ್ತಿ, ಹೆಣ್ಣು ಮಕ್ಕಳು ಹೊಣೆಗಾರಿಕೆ ಎಂದು ಭಾವಿಸುವ ಅನೇಕ ಗ್ರಾಮಗಳು ಭಾರತದಲ್ಲಿವೆ' ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದರು.
'ಹೆಣ್ಣು ಮಕ್ಕಳು ಶಿಕ್ಷಣ ವಂಚಿತರಾಗಲು ಬಡತನದಿಂದ ಪುರುಷ ಪ್ರದಾನ ವ್ಯವಸ್ಥೆವರೆಗೆ ವಿವಿಧ ಕಾರಣಗಳಿವೆ. ಕುಟುಂಬ ಕಾರಣಕ್ಕೆ ನಾನೂ ಮೂರು ವರ್ಷ ಶಿಕ್ಷಣದಿಂದ ಹೊರಗುಳಿದೆ. ಆಗ ವಿಷಯದ ಗಂಭೀರತೆ ಅರಿವಾಯಿತು. ನಂತರ ಚಿಕ್ಕಮ್ಮನ ನೆರವಿನಿಂದ ಕಲಿಕೆಗೆ ಮರಳಿದ್ದೆ. ಇದೇ ಮುಂದೆ ನನ್ನಂತ ಹೆಣ್ಣುಮಕ್ಕಳಿಗೆ ನೆರವಾಗಬೇಕು ಎಂಬ ನಿರ್ಧಾರಕ್ಕೆ ಕಾರಣವಾಯಿತು' ಎಂದರು.