HEALTH TIPS

5 ವರ್ಷಗಳಲ್ಲಿ ವಿದೇಶಗಳಲ್ಲಿ 403 ಭಾರತೀಯ ವಿದ್ಯಾರ್ಥಿಗಳ ಸಾವು, ಕೆನಡದಲ್ಲೇ ಅತ್ಯಧಿಕ!

                ವದೆಹಲಿ :2018ರ ಬಳಿಕ ಒಟ್ಟು 403 ಭಾರತೀಯ ವಿದ್ಯಾರ್ಥಿಗಳು ವಿದೇಶಗಳಲ್ಲಿ ಮೃತರಾಗಿದ್ದಾರೆ ಎಂದು ಕೇಂದ್ರ ಸರಕಾರ ಗುರುವಾರ ತಿಳಿಸಿದೆ. ಈ ಪೈಕಿ ಅತಿ ಹೆಚ್ಚು, ಅಂದರೆ 91 ಸಾವುಗಳು ಕೆನಡದಲ್ಲಿ ಸಂಭವಿಸಿವೆ.

               ಸಹಜ ಕಾರಣಗಳು, ಅಪಘಾತಗಳು ಮತ್ತು ಕಾಯಿಲೆಗಳು ಸೇರಿದಂತೆ ವಿವಿಧ ಕಾರಣಗಳಿಂದಾಗಿ ಸಾವುಗಳು ಸಂಭವಿಸಿವೆ ಎಂದು ವಿದೇಶ ವ್ಯವಹಾರಗಳ ಸಹಾಯಕ ಸಚಿವ ವಿ. ಮುರಳೀಧರನ್ ಲಿಖಿತ ಉತ್ತರದಲ್ಲಿ ರಾಜ್ಯಸಭೆಗೆ ತಿಳಿಸಿದರು.

               ತೃಣಮೂಲ ಕಾಂಗ್ರೆಸ್ ಸಂಸದೆ ಮೌಸಮ್ ಬೇನಝೀರ್ ನೂರ್ ಕೇಳಿದ ಪ್ರಶ್ನೆಯೊಂದಕ್ಕೆ ಸಚಿವರು ಈ ಉತ್ತರ ನೀಡಿದ್ದಾರೆ. 2018ರ ಬಳಿಕ ವಿದೇಶಗಳಲ್ಲಿ ಮೃತಪಟ್ಟಿರುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಮತ್ತು ಅವರ ಸಾವುಗಳಿಗೆ ಕಾರಣಗಳನ್ನು ಒದಗಿಸುವಂತೆ ಸಂಸದೆ ಕೋರಿದ್ದರು. ವಿದೇಶಗಳಲ್ಲಿ ಕಲಿಯುತ್ತಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಾತರಿಪಡಿಸಲು ಭಾರತ ಸರಕಾರವು ಯಾವುದಾದರೂ ಕ್ರಮಗಳನ್ನು ತೆಗೆದುಕೊಂಡಿದ್ದೆಯೇ ಎಂಬುದಾಗಿಯೂ ಅವರು ಪ್ರಶ್ನಿಸಿದ್ದರು.

                  ಇದಕ್ಕೆ ಉತ್ತರಿಸಿದ ಮುರಳೀಧರನ್, 34 ದೇಶಗಳಲ್ಲಿ ಭಾರತೀಯ ವಿದ್ಯಾರ್ಥಿಗಳು ಕಲಿಯುತ್ತಿದ್ದು, 2018ರ ಬಳಿಕ ಕೆನಡದಲ್ಲಿ ಅತಿ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಹೇಳಿದರು. ನಂತರದ ಸ್ಥಾನದಲ್ಲಿ ಬ್ರಿಟನ್ ಇದ್ದು, ಕಳೆದ ಐದು ವರ್ಷಗಳಲ್ಲಿ ಅಲ್ಲಿ 48 ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಸಚಿವರು ತಿಳಿಸಿದರು.

              ಇದೇ ಅವಧಿಯಲ್ಲಿ, ರಶ್ಯದಲ್ಲಿ 40, ಅಮೆರಿಕದಲ್ಲಿ 36, ಆಸ್ಟ್ರೇಲಿಯದಲ್ಲಿ 35, ಉಕ್ರೇನಿನಲ್ಲಿ 21, ಜರ್ಮನಿಯಲ್ಲಿ 20, ಸೈಪ್ರಸ್ ನಲ್ಲಿ 14 ಹಾಗೂ ಇಟಲಿ ಮತ್ತು ಫಿಲಿಪ್ಪೀನ್ಸ್ ನಲ್ಲಿ ತಲಾ 10 ಭಾರತೀಯ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸಚಿವರ ಹೇಳಿಕೆ ತಿಳಿಸಿದೆ.

             ವಿದೇಶಗಳಲ್ಲಿ ಕಲಿಯುತ್ತಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಯು ಸರಕಾರದ ಅತ್ಯುನ್ನತ ಆದ್ಯತೆಗಳ ಪೈಕಿ ಒಂದಾಗಿದೆ ಎಂದು ಸಚಿವರು ಹೇಳಿದರು.

                 ''ಭಾರತೀಯ ರಾಯಭಾರ ಕಚೇರಿಗಳ ಮುಖ್ಯಸ್ಥರು ಮತ್ತು ಹಿರಿಯ ಅಧಿಕಾರಿಗಳು ವಿಶ್ವವಿದ್ಯಾನಿಲಯಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ನಿಯಮಿತವಾಗಿ ಭೇಟಿ ನೀಡಿ ಭಾರತೀಯ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿ ಸಂಘಗಳೊಂದಿಗೆ ಸಂವಹನ ನಡೆಸುತ್ತಿದ್ದಾರೆ'' ಎಂದು ಮುರಳೀಧರನ್ ತಿಳಿಸಿದರು.

                 ಮಾನಸಿಕ ಕ್ಷೋಭೆಗೆ ಒಳಗಾಗಿರುವ ಭಾರತೀಯ ವಿದ್ಯಾರ್ಥಿಗಳಿಗೆ ಭಾರತೀಯ ಕಾನ್ಸುಲರ್ ಕಚೇರಿಗಳು ತುರ್ತು ವೈದ್ಯಕೀಯ ಚಿಕಿತ್ಸೆ ಮತ್ತು ವಸತಿ ಸೇರಿದಂತೆ ಸಾಧ್ಯವಿರುವ ಎಲ್ಲಾ ನೆರವುಗಳನ್ನು ನೀಡುತ್ತಿವೆ ಎಂದು ಅವರು ನುಡಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries