ನವದೆಹಲಿ: ದೇಶದಲ್ಲಿ ಬುಧವಾರ 529 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 4,093ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಕರ್ನಾಟಕದಲ್ಲಿ ಇಬ್ಬರು ಮತ್ತು ಗುಜರಾತ್‌ನಲ್ಲಿ ಒಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ.
ಡಿ.5ರವರೆಗೂ ದೈನಂದಿನ ಪ್ರಕರಣಗಳ ಸಂಖ್ಯೆ ಎರಡಂಕಿಗೆ ಇಳಿಕೆಯಾಗಿತ್ತು.
ಇದುವರೆಗೆ ದೇಶದಲ್ಲಿ ಪತ್ತೆಯಾದ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 4.50 ಕೋಟಿಯಾಗಿದ್ದು, 4.44 ಕೋಟಿ ಜನರು ಚೇತರಿಸಿಕೊಂಡಿದ್ದಾರೆ. ಚೇತರಿಕೆ ಪ್ರಮಾಣ ಶೇ 98.81ರಷ್ಟಿದೆ. ಒಟ್ಟು 5.3 ಲಕ್ಷ ಮಂದಿ ಸಾಂಕ್ರಾಮಿಕದಿಂದ ಮೃತಪಟ್ಟಿದ್ದಾರೆ.
ಜೆಎನ್.1 ಸೋಂಕಿತರ ಸಂಖ್ಯೆ 109ಕ್ಕೆ ಏರಿಕೆ:
ಮತ್ತೆ 40 ಮಂದಿಯಲ್ಲಿ ಕೊರೊನಾ ವೈರಾಣುವಿನ ಹೊಸ ಉಪ ತಳಿ ಜೆಎನ್.1 ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ ಜೆಎನ್.1 ಸೋಂಕಿತರ ಸಂಖ್ಯೆ 109ಕ್ಕೆ ಏರಿಕೆಯಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಈ ಪೈಕಿ ಕರ್ನಾಟಕದಲ್ಲಿ 34, ಗುಜರಾತ್‌ನಲ್ಲಿ 36, ಗೋವಾದಲ್ಲಿ 14 ಮತ್ತು ಮಹಾರಾಷ್ಟ್ರದಲ್ಲಿ 9 ಪ್ರಕರಣಗಳು ಪತ್ತೆಯಾಗಿವೆ. ಉಳಿದಂತೆ ಕೇರಳದಲ್ಲಿ ಆರು, ರಾಜಸ್ಥಾನ ಮತ್ತು ತಮಿಳುನಾಡಿನಲ್ಲಿ ತಲಾ ನಾಲ್ಕು ಹಾಗೂ ತೆಲಂಗಾಣದಲ್ಲಿ ಎರಡು ಪ್ರಕರಣಗಳು ದೃಢಪಟ್ಟಿವೆ. ಬಹುತೇಕ ರೋಗಿಗಳು ಮನೆಯಲ್ಲಿ ಪ್ರತ್ಯೇಕವಾಗಿ ವಾಸವಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿವೆ.