ಇಂಫಾಲ್: ಕುಕಿ ಹಾಗೂ ಮೈತೇಯಿ ಬುಡಕಟ್ಟುಗಳಿಗೆ ಸೇರಿದ ಒಟ್ಟು 64 ಸಂತ್ರಸ್ತರ ಮೃತದೇಹಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಕಣಿವೆ ರಾಜ್ಯ ಮಣಿಪುರದಲ್ಲಿ ಜನಾಂಗೀಯ ಸಂಘರ್ಷ ಆರಂಭವಾದ ನಂತರ ನಡೆದ ಹಿಂಸಾಚಾರದಲ್ಲಿ ಮೃತಪಟ್ಟಿದ್ದವರ ಮೃತದೇಹಗಳನ್ನು ವಿವಿಧ ಆಸ್ಪತ್ರೆಗಳ ಶವಾಗಾರದಲ್ಲಿಯೇ ಇಡಲಾಗಿತ್ತು.
ಜೆಎನ್‌ಐಎಂಎಸ್ ಹಾಗೂ ಆರ್‌ಐಎಂಎಸ್ ಆಸ್ಪತ್ರೆಗಳಲ್ಲಿ ಇರಿಸಲಾಗಿದ್ದ ಕುಕಿ ಸಮುದಾಯದ 60 ಮೃತದೇಹಗಳನ್ನು ಬಿಗಿ ಭದ್ರತೆ ನಡುವೆ ಏರ್‌ಲಿಫ್ಟ್ ಮಾಡಲಾಯಿತು. ಮಣಿಪುರ ಪೊಲೀಸರು ಹಾಗೂ ಸೇನೆಯ ಅಸ್ಸಾಂ ರೈಫಲ್ಸ್ ಯೋಧರು ಭದ್ರತೆ ಒದಗಿಸಿದ್ದರು.
ಚುರಚಾಂದಪುರದ ಶವಾಗಾರದಲ್ಲಿ ಮೈತೇಯಿ ಸಮುದಾಯದಕ್ಕೆ ಸೇರಿದವರ ನಾಲ್ಕು ಮೃತದೇಹಗಳನ್ನು ಇಡಲಾಗಿತ್ತು. ಅವುಗಳನ್ನು ಸಹ ಇಂಫಾಲ್‌ಗೆ ತಂದು, ಕುಟುಂಬಗಳಿಗೆ ಹಸ್ತಾಂತರಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಜನಾಂಗೀಯ ಸಂಘರ್ಷ ಕುರಿತು ನಡೆಯುತ್ತಿರುವ ತನಿಖೆ, ಪರಿಹಾರ ಕಾರ್ಯಗಳು ಹಾಗೂ ಪುನರ್ವಸತಿಯ ಮೇಲ್ವಿಚಾರಣೆಗಾಗಿ ಹೈಕೋರ್ಟ್‌ನ ಮೂವರು ನಿವೃತ್ತ ನ್ಯಾಯಮೂರ್ತಿಗಳನ್ನು ಒಳಗೊಂಡ ಸಮಿತಿಯನ್ನು ಸುಪ್ರೀಂ ಕೋರ್ಟ್ ರಚಿಸಿದೆ. ನ್ಯಾಯಮೂರ್ತಿಗಳಾದ ಗೀತಾ ಮಿತ್ತಲ್, ಶಾಲಿನಿ ಜೋಷಿ ಹಾಗೂ ಆಶಾ ಮೆನನ್ ಈ ಸಮಿತಿಯಲ್ಲಿದ್ದಾರೆ.
ಸಮಿತಿಯ ಶಿಫಾರಸಿನಂತೆ, ಅಂತ್ಯಕ್ರಿಯೆಗಾಗಿ ಮೃತರ ದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುವಂತೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು.
ರಾಜ್ಯದಲ್ಲಿ ನಡೆದ ಹಿಂಸಾಚಾರದಲ್ಲಿ 175 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ, 169 ಮಂದಿಯನ್ನು ಗುರುತಿಸಲಾಗಿದೆ ಎಂದು ಸಮಿತಿಯ ವರದಿಯಲ್ಲಿ ಹೇಳಲಾಗಿದೆ.