ಕಟ್ಟಪ್ಪನ: ಇಡುಕ್ಕಿಯ ವಂಡಿಪೆರಿಯಾರ್‍ನಲ್ಲಿ ಆರು ವರ್ಷದ ಬಾಲಕಿಯನ್ನು ಅತ್ಯಾಚಾರಗೈದು ಕೊಲೆ ನಡೆಸಿದ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‍ಗೆ ಭಾರೀ ಹಿನ್ನಡೆಯಾಗಿದೆ.
ಆರೋಪಿ ಅರ್ಜುನ್ (24)ನನ್ನು ನ್ಯಾಯಾಲಯ ಬಿಡುಗಡೆ ಮಾಡಿದೆ. ಕಟ್ಟಪನ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿ.ಮಂಜು ಆರೋಪಿಯನ್ನು ಸುಮ್ಮನೆ ಬಿಡುವಂತೆ ಆದೇಶ ನೀಡಿರುವರು. ಕೊಲೆ ಮತ್ತು ಅತ್ಯಾಚಾರ ಸೇರಿದಂತೆ ಆರೋಪಗಳನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್‍ಗೆ ಸಾಧ್ಯವಾಗಲಿಲ್ಲ ಎಂದು ನ್ಯಾಯಾಲಯವು ಬೆಟ್ಟುಮಾಡಿತು.
ಹುಡುಗಿಯನ್ನು ಜೂನ್ 30, 2021 ರಂದು ಹತ್ಯೆಗೈಯ್ಯಲಾಗಿತ್ತು. ಚಾರ್ಜ್ ಶೀಟ್ ಸಲ್ಲಿಕೆಯಾದ ಎರಡು ವರ್ಷಗಳ ನಂತರ ತೀರ್ಪು ನೀಡಲಾಗಿದೆ. ತೀರ್ಪು ಕೇಳಲು ಬಾಲಕಿಯ ಪೋಷಕರೂ ನ್ಯಾಯಾಲಯಕ್ಕೆ ಬಂದಿದ್ದರು. ಕೋರ್ಟ್ ತೀರ್ಪು ಬಂದಾಗ ಕೋರ್ಟ್ ನಲ್ಲೇ ಅಳಲು ತೋಡಿಕೊಂಡರು. ಆರೋಪಿಗೆ ಮರಣದಂಡನೆ ವಿಧಿಸಬೇಕು ಎಂಬುದು ಮಗುವಿನ ತಂದೆ ಸೇರಿದಂತೆ ಅಲ್ಲಿದ್ದವರ ಆಗ್ರಹವಾಗಿತ್ತು. ವಿಚಾರಣೆಯ ಸಂದರ್ಭದಲ್ಲಿ ಪೋಲೀಸರು ಮತ್ತು ಪ್ರಾಸಿಕ್ಯೂಷನ್ ಉತ್ತಮವಾಗಿ ಸಹಕರಿಸಿದ್ದಾರೆ ಮತ್ತು ಹೊಸದಾಗಿ ನೇಮಕಗೊಂಡ ನ್ಯಾಯಾಧೀಶರು ಪ್ರಕರಣವನ್ನು ಚೆನ್ನಾಗಿ ಅಧ್ಯಯನ ಮಾಡಿದ್ದಾರೆ ಎಂದು ನಂಬಿದ್ದೆವು ಎಂದು ತಂದೆ ಹೇಳಿದ್ದರು. ಆದರೆ ನ್ಯಾಯಾಲಯದ ತೀರ್ಪು ನಿರಾಶಾದಾಯಕವಾಗಿತ್ತು.
ಬಾಲಕಿಯ ಸಂಬಂಧಿಕರು ನ್ಯಾಯಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆಯನ್ನು ಪರಿಶೀಲಿಸುವುದಾಗಿ ತನಿಖಾಧಿಕಾರಿಗಳು ತಿಳಿಸಿದ್ದಾರೆ. ನಂತರ ಪ್ರಾಸಿಕ್ಯೂಷನ್ ಪ್ರಕರಣದ ಹೆಚ್ಚಿನ ತನಿಖೆಗಾಗಿ ನ್ಯಾಯಾಲಯವನ್ನು ಕೇಳಿದೆ. ಎರಡು ವರ್ಷಗಳ ಹಿಂದೆ ವಂಡಿಪೆರಿಯಾರ್ ನಲ್ಲಿ ನಡೆದ ಕ್ರೌರ್ಯ ರಾಜ್ಯಾದ್ಯಂತ ಬೆಚ್ಚಿ ಬೀಳಿಸಿತ್ತು. ಅರ್ಜುನ್ ವಿರುದ್ಧ ಕೊಲೆ, ಅತ್ಯಾಚಾರ ಮತ್ತು ಪೋಕ್ಸೋ ಕಾಯ್ದೆಯ ವಿವಿಧ ಸೆಕ್ಷನ್‍ಗಳ ಆರೋಪ ಹೊರಿಸಲಾಗಿತ್ತು.
ಚಾರ್ಜ್ ಶೀಟ್ ಅನ್ನು ಸೆಪ್ಟೆಂಬರ್ 21, 2021 ರಂದು ಸಲ್ಲಿಸಲಾಯಿತು. ಕಳೆದ ವರ್ಷ ಕಟ್ಟಪ್ಪನ ತ್ವರಿತ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಆರಂಭಗೊಂಡಿತ್ತು. ಪ್ರಕರಣದಲ್ಲಿ 48 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಯಿತು. 69ಕ್ಕೂ ಹೆಚ್ಚು ದಾಖಲೆಗಳು ಮತ್ತು 16 ವಸ್ತುಗಳನ್ನು ಸಾಕ್ಷ್ಯವಾಗಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಅತ್ಯಾಚಾರದ ವೇಳೆ ಪ್ರಜ್ಞಾಹೀನಳಾಗಿದ್ದ ಬಾಲಕಿಯನ್ನು ಕೊಂದು ನಂತರ ನೇಣು ಹಾಕಲಾಗಿದೆ ಎಂದು ಮರಣೋತ್ತರ ಪರೀಕ್ಷೆಯ ವರದಿ ತಿಳಿಸಿದೆ. ಅಲ್ಲಿಯವರೆಗೆ ಆರು ವರ್ಷದ ಬಾಲಕಿ ಕೊರಳಿಗೆ ಶಾಲು ಹಾಕಿಕೊಂಡು ಸಾವನ್ನಪ್ಪಿದ್ದಾಳೆ ಎಂದು ಎಲ್ಲರೂ ಭಾವಿಸಿದ್ದರು.
ವಂಡಿಪೆರಿಯಾರ್ ಮೂಲದ ಅರ್ಜುನ್ ಎಂಬಾತ ಪೋಲೀಸರ ತನಿಖೆಯಲ್ಲಿ ಆರೋಪಿ ಎಂದು ಪತ್ತೆಹಚ್ಚಲಾಗಿತ್ತು.