ಬದಿಯಡ್ಕ : ಕಾಸರಗೋಡಿನ ಹಿರಿಯ ಸಾಹಿತಿ, ಶಿಕ್ಷಣ ತಜ್ಞ, ಸಂಘಟಕ, ವಿಶ್ರಾಂತ ಅಧ್ಯಾಪಕರಾದ ವಿ ಬಿ ಕುಳಮರ್ವರ 70ನೇ ವರ್ಷಾಚರಣೆಯ ಅಂಗವಾಗಿ ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಜಂಟಿ ಆಶ್ರಯದಲ್ಲಿ ವಿ. ಬಿ ಕುಳಮರ್ವ-70 ಸಾಹಿತ್ಯೋತ್ಸವ ಕಾರ್ಯಕ್ರಮವು ಇದೇ ಡಿ 10ರಂದು ಬೆಳಗ್ಗೆ 9.30ರಿಂದ ಸಂಜೆ 4ರ ತನಕ ವಿ ಬಿ ಕುಳಮರ್ವ ಅವರ ಸ್ವಗೃಹವಾದ ಕುಂಬಳೆ ನಾರಾಯಣ ಮಂಗಲದ ಶ್ರೀನಿಧಿಯಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಕೃತಿ ಬಿಡುಗಡೆ, ಗುರು ನಮನ, ಸನ್ಮಾನ ಹಾಗೂ ಕಾಸರಗೋಡು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 70ಕ್ಕೂ ಮಿಕ್ಕಿದ ಕವಿಗಳ ಕವಿಗೋಷ್ಠಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರಾಂಶುಪಾಲ ಪ್ರೊ. ಪಿ ಎನ್ ಮೂಡಿತ್ತಾಯ, ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವರಾಮ ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹರೀಶ್ ಸುಲಯ ಒಡ್ಡಂಬೆಟ್ಟು, ಬಂಟ್ವಾಳ ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಆನಂದ ರೈ ಅಡ್ಕಸ್ಥಳ, ಮಂಗಳೂರು ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಗೋಪಾಲಕೃಷ್ಣ ಶಾಸ್ತ್ರಿ ಮೊದಲಾದವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿ ಬಿ ಕುಳಮರ್ವ ಅವರ ಅಭಿಮಾನಿಗಳು, ಮಿತ್ರರು ಭಾಗವಹಿಸಲಿದ್ದಾರೆ.