ಹೈದರಾಬಾದ್: ಮಂಗಳವಾರ ಬಾಪಟ್ಲಾ ಸಮೀಪ ಆಂಧ್ರಪ್ರದೇಶದ ಕರಾವಳಿಯನ್ನು ದಾಟಿರುವ ಮಿಚಾಂಗ್ ಚಂಡಮಾರುತವು ದುರ್ಬಲಗೊಂಡಿದೆ. ಅದಕ್ಕೂ ಮುನ್ನ ಆಂಧ್ರಪ್ರದೇಶದಲ್ಲಿ ಭಾರಿ ವಿನಾಶ ಸೃಷ್ಟಿಸಿದೆ.
ಚಂಡಮಾರುತವು 770 ಕಿ.ಮೀ ರಸ್ತೆ ಹಾನಿಗೊಳಗಾಗಿದ್ದು, 35 ಮರಗಳು ಧರೆಗುರುಳಿವೆ.
ಮುಖ್ಯಮಂತ್ರಿಗಳ ಕಚೇರಿ (ಸಿಎಂಒ) ಹಂಚಿಕೊಂಡ ಮಾಹಿತಿಯ ಪ್ರಕಾರ, 25 ಹಳ್ಳಿಗಳ ಮುಳುಗಡೆ ಸೇರಿದಂತೆ 194 ಹಳ್ಳಿಗಳು ಮತ್ತು ಎರಡು ಪಟ್ಟಣಗಳ ಸುಮಾರು 40 ಲಕ್ಷ ಜನರು ಮಿಚಾಂಗ್ ಚಂಡಮಾರುತದಿಂದ ಸಂಕಷ್ಟಕ್ಕೀಡಾಗಿದ್ದಾರೆ.
ತಿರುಪತಿ ಜಿಲ್ಲೆಯಲ್ಲಿ ಸೋಮವಾರ ಗುಡಿಸಲಿನ ಗೋಡೆ ಕುಸಿದು ನಾಲ್ಕು ವರ್ಷದ ಬಾಲಕ ಸಾವಿಗೀಡಾಗಿದ್ದಾನೆ ಎಂದು ಆಂಧ್ರಪ್ರದೇಶ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ನಿರ್ದೇಶಕ ಬಿ,ಆರ್, ಅಂಬೇಡ್ಕರ್ ಪಿಟಿಐಗೆ ತಿಳಿಸಿದ್ದಾರೆ.
ರಾಜ್ಯದಾದ್ಯಂತ 204 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದ್ದು, 15,173 ಜನರನ್ನು ಸ್ಥಳಾಂತರಿಸಲಾಗಿದೆ. ಪರಿಹಾರ ಕಾರ್ಯಗಳ ಭಾಗವಾಗಿ 18,073 ಆಹಾರ ಪೊಟ್ಟಣಗಳು ಮತ್ತು 1 ಲಕ್ಷಕ್ಕೂ ಹೆಚ್ಚು ನೀರಿನ ಪ್ಯಾಕೆಟ್‌ಗಳನ್ನು ವಿತರಿಸಲಾಗಿದೆ. 80 ಆರೋಗ್ಯ ಶಿಬಿರಗಳನ್ನು ಸಹ ತೆರೆಯಲಾಗಿದೆ.
ಸಂತ್ರಸ್ತ ಜಿಲ್ಲೆಗಳಿಗೆ ರಾಜ್ಯ ಸರ್ಕಾರ ಪರಿಹಾರ ಕಾರ್ಯಗಳಿಗಾಗಿ ₹23 ಕೋಟಿ ಬಿಡುಗಡೆ ಮಾಡಿದೆ.
78 ಗುಡಿಸಲುಗಳು, 232 ಮನೆಗಳು ಸಂಪೂರ್ಣ ಹಾನಿಗೊಳಗಾಗಿವೆ.
ರಾಜ್ಯದ ಕೋನಸೀಮಾ (234 ಕಿ. ಮೀ), ಪ್ರಕಾಶಂ (55 ಕಿ. ಮೀ), ನೆಲ್ಲೂರು (433 ಕಿ. ಮೀ) ಮತ್ತು ತಿರುಪತಿ (48 ಕಿ.ಮೀ) ಜಿಲ್ಲೆಗಳಲ್ಲಿ 770 ಕಿ. ಮೀ ರಸ್ತೆಗಳು ಹಾನಿಗೊಳಗಾಗಿವೆ.
ಆಂಧ್ರಪ್ರದೇಶದ ಪವರ್ ಡಿಸ್ಟ್ರಿಬ್ಯೂಷನ್ ಕಂಪನಿ ಲಿಮಿಟೆಡ್‌ನ 13 33-ಕೆವಿ ಫೀಡರ್‌ಗಳು, 312 11-ಕೆವಿ ಫೀಡರ್‌ಗಳು, 29 33/11-ಕೆವಿ ಉಪ-ಫೀಡರ್‌ಗಳು, ಒಂಬತ್ತು 33-ಕೆವಿ ಕಂಬಗಳು, 140 11-ಕೆವಿ ಕಂಬಗಳು ಮತ್ತು 244-ಎಲ್‌ಟಿ ಕಂಬಗಳಿಗೆ ಹಾನಿಯಾಗಿದೆ.
ನೆಲ್ಲೂರು ಜಿಲ್ಲೆಯ ಮನುಬೋಳುವಿನಲ್ಲಿ 366.5 ಮಿ.ಮೀ ಮಳೆ ದಾಖಲಾಗಿದೆ.