ನವದೆಹಲಿ: ಸಂಸತ್ತಿಗೆ ನುಗ್ಗಿ ಲೋಕಸಭೆ ಕಲಾಪದ ವೇಳೆ ಹೊಗೆ ಬಾಂಬ್ ಸಿಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ನಾಲ್ವರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ 7 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿ ವಿಶೇಷ ನ್ಯಾಯಾಲಯ ಗುರುವಾರ ಆದೇಶಿಸಿದೆ.
ಬಂಧಿತ ಐವರು ಆರೋಪಿಗಳ ಪೈಕಿ ನಾಲ್ವರನ್ನು ಪಟಿಯಾಲ ಹೌಸ್ ಕೋರ್ಟ್ ಗೆ ಹಾಜರುಪಡಿಸಿದ ದೆಹಲಿ ಪೊಲೀಸರು, ಆರೋಪಿಗಳನ್ನು 15 ದಿನ ತಮ್ಮ ಕಸ್ಟಡಿಗೆ ನೀಡುವಂತೆ ಕೋರಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ನಾಲ್ವರು ಆರೋಪಿಗಳನ್ನು ಏಳು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಆರೋಪಿಗಳಾದ ಮನೋರಂಜನ್ ಡಿ, ಸಾಗರ್ ಶರ್ಮಾ, ಅಮೋಲ್ ಶಿಂಧೆ ಮತ್ತು ನೀಲಂ ದೇವಿ ಅವರ ವಿಚಾರಣೆ ನಡೆಸಿದ ಎನ್‌ಐಎ ಪ್ರಕರಣಗಳ ವಿಶೇಷ ನ್ಯಾಯಾಧೀಶ ಹರ್ದೀಪ್ ಕೌರ್ ಅವರು, ಏಳು ದಿನ ಪೊಲೀಸ್ ವಶಕ್ಕೆ ನೀಡಿದ್ದಾರೆ.
ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಜೊತೆಗೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.
ಲೋಕಸಭೆ ಕಲಾಪದ ವೇಳೆ ಸಾಗರ್ ಶರ್ಮಾ ಮತ್ತು ಮನೋರಂಜನ್ ಡಿ, ಸಂದರ್ಶಕರ ಗ್ಯಾಲರಿಯಿಂದ ಜಿಗಿದು, ಡಬ್ಬಿಗಳಿಂದ ಹಳದಿ ಬಣ್ಣದ ಹೊಗೆ ಬಾಂಬ್ ಸಿಡಿಸಿದ್ದರು.
ಅದೇ ಸಮಯದಲ್ಲಿ, ಇತರ ಇಬ್ಬರು ಆರೋಪಿಗಳು - ಅಮೋಲ್ ಶಿಂಧೆ ಮತ್ತು ನೀಲಂ ದೇವಿ - ಸಂಸತ್ತಿನ ಹೊರಗೆ "ತಾನಾಶಾಹಿ ನಹೀ ಚಲೇಗಿ" ಎಂದು ಕೂಗುತ್ತಾ ಡಬ್ಬಿಗಳಿಂದ ಬಣ್ಣದ ಹೊಗೆ ಸಿಡಿಸಿದರು.