ಇಂಫಾಲ್: 2023ರಲ್ಲಿ ಭೀಕರ ಜನಾಂಗೀಯ ಸಂಘರ್ಷದಿಂದ ನಲುಗಿದ್ದ ಮಣಿಪುರವು ವರ್ಷಾಂತ್ಯದಲ್ಲಿ ಸಹಜ ಸ್ಥಿತಿಗೆ ಮರಳುತ್ತಿದೆ.
ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು ಮೇ 3ರಂದು. ಆದರೆ, ರಾಜ್ಯ ಸರ್ಕಾರವು ಅರಣ್ಯ ಪ್ರದೇಶಗಳಿಂದ ಜನರನ್ನು ಒಕ್ಕಲೆಬ್ಬಿಸಲು ಪ್ರಯತ್ನ ನಡೆಸಿದ್ದ ಹಿನ್ನೆಲೆಯಲ್ಲಿ ಚುರಾಚಾಂದ್‌ಪುರ ಮತ್ತು ಕಾಂಗ್ಪೋಕ್ಪಿ ಜಿಲ್ಲೆಗಳಲ್ಲಿ ಫೆಬ್ರುವರಿಯಿಂದಲೇ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿತ್ತು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸುಧಾರಿಸಿರುವುದನ್ನು ಮನಗಂಡ ಅಧಿಕಾರಿಗಳು ಡಿಸೆಂಬರ್ 3ರಿಂದ ರಾಜ್ಯದ ಬಹುತೇಕ ಕಡೆಗಳಲ್ಲಿ ಮೊಬೈಲ್ ಇಂಟರ್‌ನೆಟ್‌ಅನ್ನು ಪುನರ್ ಸ್ಥಾಪಿಸಿದ್ದಾರೆ.
ಇಂಫಾಲ್‌ನ ಶವಾಗಾರಗಳಲ್ಲೇ ಬಾಕಿಯಾಗಿದ್ದ, ವಾರಸುದಾರರಿಲ್ಲದ ಮೃತದೇಹಗಳ ವಿಲೇವಾರಿ ಮಾಡಲೇಬೇಕೆಂದು ಸುಪ್ರೀಂ ಆದೇಶ ನೀಡಿದ ಬಳಿಕ, ಮೃತದೇಹಗಳನ್ನು ಅಂತ್ಯ ಸಂಸ್ಕಾರಕ್ಕಾಗಿ ಚುರಾಚಾಂದ್‌ಪುರ ಮತ್ತು ಕಾಂಗ್ಪೋಕ್ಪಿ ಜಿಲ್ಲೆಗಳಿಗೆ ಡಿಸೆಂಬರ್ ಮೂರನೇ ವಾರ ಕಳಿಸಲಾಗಿದೆ.
ಡಿ.15ರಂದು 19 ಮೃತದೇಹಗಳ ಅಂತ್ಯ ಸಂಸ್ಕಾರ ಮಾಡಲಾಗಿದೆ ಮತ್ತು ಡಿ. 20ರಂದು ಕುಕಿ ಝೋ ಸಮುದಾಯಕ್ಕೆ ಸೇರಿದ್ದ 87 ಜನರ ಮೃತದೇಹಗಳ ಸಂಸ್ಕಾರ ಮಾಡಲಾಗಿದೆ.
ಸುಮಾರು ಏಳು ತಿಂಗಳು ನಡೆದ ಹಿಂಸಾಚಾರವು ರಾಜ್ಯದಲ್ಲಿ ವ್ಯಾಪಾರ ವಹಿವಾಟು, ಶಾಲೆ ಕಾಲೇಜುಗಳು ಮತ್ತು ಇತರ ಸಂಸ್ಥೆಗಳ ಕಾರ್ಯಾಚರಣೆ ಮೇಲೆ ಗಂಭೀರ ದುಷ್ಪರಿಣಾಮ ಉಂಟುಮಾಡಿದೆ. ರಾಜ್ಯದ ಆರ್ಥಿಕತೆಯ ಮೂಲಾಧಾರವಾದ ಕೃಷಿ ಚಟುವಟಿಕೆಗೂ ಭಾರಿ ಹೊಡೆತ ಕೊಟ್ಟಿದೆ.
ರಾಜ್ಯದಲ್ಲಿಯ ರಾಷ್ಟ್ರೀಯ ಹೆದ್ದಾರಿಗಳನ್ನು ಕುಕಿ ಸಮುದಾಯದ ಸಂಘಟನೆಗಳು ಬಂದ್ ಮಾಡಿದ್ದರಿಂದ ಅಗತ್ಯ ಸಾಮಾಗ್ರಿಗಳನ್ನು ಇತರ ರಾಜ್ಯಗಳಿಂದ ತರಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಭದ್ರತಾಪಡೆಗಳು ಜುಲೈನಿಂದ ಹೆದ್ದಾರಿಗಳಲ್ಲಿ ಭದ್ರತೆ ನೀಡಲು ಆರಂಭಿಸಿದ ಬಳಿಕ ಸರಕು ವಾಹನಗಳು ಮಣಿಪುರದೊಳಗೆ ಪ್ರವೇಶಿಸುತ್ತಿವೆ.