ಮಧುರೈ: ಪ್ರವಾಹದಿಂದಾಗಿ ಸುಮಾರು 800 ಮಂದಿ ಪ್ರಯಾಣಿಕರು ತಮಿಳುನಾಡಿನ ತೂತುಕುಡಿ ಜಿಲ್ಲೆಯ ಶ್ರೀವೈಕುಂಡಂ ರೈಲ್ವೆ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ತಿರುಚೆಂದೂರಿನಿಂದ ಚೆನ್ನೈಗೆ ತೆರಳುತ್ತಿದ್ದ ಎಕ್ಸ್‌ಪ್ರೆಸ್ ರೈಲಿನ ಪ್ರಯಾಣಿಕರು ಸುಮಾರು 20 ಗಂಟೆಗಳಿಂದ ಶ್ರೀವೈಕುಂಡಂನಲ್ಲಿ ಸಿಲುಕಿಕೊಂಡಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ನಿಲ್ದಾಣವನ್ನು ತಲುಪಲು ಯತ್ನಿಸುತ್ತಿದೆ. ತಿರುಚೆಂದೂರು -ಚೆನ್ನೈ ಎಗ್ಮೋರ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 20606) ಡಿಸೆಂಬರ್ 17 ರಂದು ರಾತ್ರಿ 8.25ಕ್ಕೆ ತಿರುಚೆಂದೂರಿನಿಂದ ಚೆನ್ನೈಗೆ ಹೊರಟಿತ್ತು.
ಭಾರೀ ಮಳೆ ಮತ್ತು ಪ್ರವಾಹ ಪರಿಸ್ಥಿತಿಯಿಂದಾಗಿ ತಿರುಚೆಂದೂರಿನಿಂದ ಚೆನ್ನೈಗೆ ಹೋಗುತ್ತಿದ್ದ ರೈಲನ್ನು ತಿರುಚೆಂದೂರಿನಿಂದ ಸುಮಾರು 32 ಕಿಮೀ ದೂರದಲ್ಲಿರುವ ಶ್ರೀವೈಕುಂಡಂ ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ ಎಂದು ರೈಲ್ವೆ ಅಧಿಕಾರಿ ತಿಳಿಸಿದ್ದಾರೆ.
'ಒಟ್ಟು 800 ಮಂದಿ ಪ್ರಯಾಣಿಕರು ಸಿಕ್ಕಿಹಾಕಿಕೊಂಡಿದ್ದಾರೆ. ಅವರಲ್ಲಿ ಸರಿಸುಮಾರು 500 ಮಂದಿ ಶ್ರೀವೈಕುಂಡಂ ರೈಲ್ವೆ ನಿಲ್ದಾಣದಲ್ಲಿದ್ದು, ಉಳಿದ 300 ಮಂದಿ ಹತ್ತಿರದ ಶಾಲೆಯಲ್ಲಿ ಆಶ್ರಯ ಪಡೆದಿದ್ದಾರೆ' ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಶ್ರೀವೈಕುಂಡಂ ಮತ್ತು ಸೇಡುಂಗನಲ್ಲೂರು ನಡುವಿನ ತಿರುನೆಲ್ವೇಲಿ-ತಿರುಚೆಂದೂರು ಭಾಗದಲ್ಲಿ ಹಳಿಗಳ ಬಳಿ ಮಣ್ಣಿನ ಸವೆತ ಉಂಟಾಗಿದೆ. ರೈಲು ಹಳಿಗಳ ಮೇಲೆ ನೀರು ಹರಿಯುತ್ತಿರುವುದರಿಂದ ದಕ್ಷಿಣ ರೈಲ್ವೆ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.