ಅಯೋಧ್ಯೆ: ಭಾರತೀಯರ ಶತಮಾನಗಳ ಕನಸು ಮುಂದಿನ ವರ್ಷ ನನಸಾಗಲಿದ್ದು ಜನವರಿ 22ಕ್ಕೆ ರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿವೆ. ಈ ಹಿನ್ನೆಲೆಯಲ್ಲಿ ರಾಮ ಜನ್ಮಭೂಮಿಯಿಂದ 84 ಕೋಸಿ ಪರಿಕ್ರಮ ಮಾರ್ಗದಲ್ಲಿ ಮದ್ಯ ಮಾರಾಟ ನಿಷೇಧಿಸಿ ಉತ್ತರ ಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ.
ಶ್ರೀರಾಮ ಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರನ್ನು ಭೇಟಿ ಮಾಡಿದ ನಂತರ ಯುಪಿ ಅಬಕಾರಿ ಸಚಿವ ನಿತಿನ್ ಅಗರ್ವಾಲ್ ಈ ಮಾಹಿತಿ ನೀಡಿದರು. ಅಯೋಧ್ಯೆಯ 84 ಕೋಸಿ ಪರಿಕ್ರಮ ಮಾರ್ಗವನ್ನು ಮದ್ಯ ನಿಷೇಧಿತ ಪ್ರದೇಶವೆಂದು ಘೋಷಿಸಲಾಗುವುದು. ಅಲ್ಲದೆ ಅದಾಗಲೇ ಇರುವ ಮದ್ಯದ ಅಂಗಡಿಗಳನ್ನು ತೆಗೆದುಹಾಕಲಾಗುವುದು ಎಂದರು.
ಅಯೋಧ್ಯೆಯೊಂದಿಗೆ ಫೈಜಾಬಾದ್, ಬಸ್ತಿ, ಅಂಬೇಡ್ಕರ್ ನಗರ, ಸುಲ್ತಾನ್‌ಪುರ ಪ್ರದೇಶಗಳನ್ನು ಶ್ರೀರಾಮ ಜನ್ಮಭೂಮಿಯ 84 ಕೋಸಿ ಪರಿಕ್ರಮ ಮಾರ್ಗದಲ್ಲಿ ಸೇರಿಸಲಾಗುವುದು. ಪರಿಕ್ರಮ ಮಾರ್ಗದಲ್ಲಿ ಮದ್ಯದಂಗಡಿ ಇರುವುದಿಲ್ಲ. ಈಗಾಗಲೇ ಇರುವ ಎಲ್ಲ ಅಂಗಡಿಗಳನ್ನು ತೆಗೆದುಹಾಕಲಾಗುವುದು. ಪರಿಕ್ರಮ ಪ್ರದೇಶದಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು ಎಂದು ಹೇಳಿದ್ದಾರೆ.
ವಾಸ್ತವವಾಗಿ, ಅಬಕಾರಿ ಸಚಿವ ನಿತಿನ್ ಅಗರ್ವಾಲ್ ಅವರು ರಾಮಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರನ್ನು ಭೇಟಿಯಾಗಲು ಬಂದಿದ್ದರು. ಸಭೆಯ ನಂತರ ಮಾತನಾಡಿದ ಅವರು, ಶ್ರೀರಾಮ ಮಂದಿರ ಕ್ಷೇತ್ರವನ್ನು ಈಗಾಗಲೇ ಮದ್ಯ ಮುಕ್ತ ಮಾಡಲಾಗಿದೆ. ಇದೀಗ 84 ಕೋಸ್ ಪರಿಕ್ರಮ ಮಾರ್ಗದಿಂದಲೂ ಮದ್ಯದಂಗಡಿಗಳನ್ನು ತೆಗೆಯಲಾಗುವುದು. ಇದಕ್ಕಾಗಿ ಅಬಕಾರಿ ಇಲಾಖೆಗೆ ಸೂಚನೆ ನೀಡಲಾಗಿದೆ.
ಇಡೀ ಅಯೋಧ್ಯೆ ಮೆಟ್ರೋಪಾಲಿಟನ್ ಪ್ರದೇಶದಲ್ಲಿ ಈ ನಿಷೇಧ ಅನ್ವಯಿಸುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. 84 ಕೋಸಿ ಪರಿಕ್ರಮ ಮಾರ್ಗದಲ್ಲಿ ಮಾತ್ರ ಅನ್ವಯಿಸುತ್ತದೆ. ಈ ಭಾಗದಲ್ಲಿ 500ಕ್ಕೂ ಹೆಚ್ಚು ಮದ್ಯದಂಗಡಿಗಳಿವೆ ಎಂದು ಹೇಳಲಾಗುತ್ತಿದೆ. ಮದ್ಯ ನಿಷೇಧದ ಘೋಷಣೆಯ ನಂತರ ಈ ಎಲ್ಲಾ ಅಂಗಡಿಗಳನ್ನು ಮುಚ್ಚಲಾಗಿದೆ. ಈ ಕುರಿತು ಅಧಿಕಾರಿಗಳಿಗೆ ಆದೇಶ ಹೊರಡಿಸಲಾಗಿದೆ. ಅಂಗಡಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗುವುದು ಎಂದರು.