ಕೀವ್: ಉಕ್ರೇನ್ ರಾಜಧಾನಿ ಕೀವ್ ಮೇಲೆ ಸೋಮವಾರ ನಸುಕಿನಲ್ಲಿ ಎಂಟು ಬ್ಯಾಲೆಸ್ಟಿಕ್ ಕ್ಷಿಪಣಿಗಳನ್ನು ರಷ್ಯಾ ಉಡಾಯಿಸಿದೆ. ಈ ಎಲ್ಲ ಕ್ಷಿಪಣಿಗಳನ್ನು ವಾಯು ರಕ್ಷಣಾ ವ್ಯವಸ್ಥೆಯಿಂದ ಹೊಡೆದುರುಳಿಸಿರುವುದಾಗಿ ಉಕ್ರೇನ್ ವಾಯುಪಡೆ ಹೇಳಿದೆ. ಇತ್ತೀಚಿನ ದಿನಗಳಲ್ಲಿ ಕೀವ್ ಮೇಲೆ ರಷ್ಯಾ ಪಡೆಗಳು ಡ್ರೋನ್ ಮತ್ತು ಕ್ಷಿಪಣಿಗಳಿಂದ ನಿರಂತರ ದಾಳಿ ನಡೆಸುತ್ತಿವೆ.
ಧ್ವಂಸಗೊಳಿಸಿದ ಕ್ಷಿಪಣಿಗಳ ಚೂರುಗಳು ಸಿಡಿದು ಮೂವರಿಗೆ ಗಾಯಗಳಾಗಿವೆ. ರಾತ್ರಿ ವೇಳೆ ಕರ್ಫ್ಯೂ ವಿಧಿಸಲಾಗಿದ್ದ ನಗರದಲ್ಲಿ ವಾಯು ದಾಳಿಯ ಸೈರನ್‌ಗಳು ಮೊಳಗಿದ ಬೆನ್ನಲ್ಲೇ ನಸುಕಿನ 4 ಗಂಟೆಯ ನಂತರ ಸರಣಿ ಸ್ಫೋಟಗಳ ಜೋರು ಸದ್ದು ಕೇಳಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ
ರಾಜಧಾನಿಯಲ್ಲಿ ಕ್ಷಿಪಣಿಗಳ ಸ್ಫೋಟದ ರಭಸಕ್ಕೆ ಕೆಲವು ಮನೆಗಳ ಕಿಟಕಿಗಳು ಹಾನಿಗೊಂಡಿವೆ ಎಂದು ಗೃಹ ಸಚಿವ ಐಹೋರ್ ಕ್ಲಿಮೆಂಕೊ ತಿಳಿಸಿದ್ದಾರೆ.
ಉಕ್ರೇನ್‌ನ ಇತರೆಡೆಯಲ್ಲಿ 18 ಡ್ರೋನ್‌ಗಳನ್ನು ರಷ್ಯಾ ಪಡೆಗಳು ರಾತ್ರಿಯಿಡಿ ಹಾರಿಸಿದ್ದು, ಇದರಲ್ಲಿ ಹೆಚ್ಚಿನ ಡ್ರೋನ್‌ಗಳ ಗುರಿ ದಕ್ಷಿಣದ ಮೈಕೊಲೈವ್ ಪ್ರದೇಶದ ಮೇಲೆ ನೆಟ್ಟಿತ್ತು. ರಾಜಧಾನಿ ಕೀವ್ ಮೇಲೆ 75 ಇರಾನಿ ಡ್ರೋನ್‌ಗಳನ್ನು ರಷ್ಯಾ ಹಾರಿಸಿದೆ. ಇದರಲ್ಲಿ 74 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಎಂದು ಉಕ್ರೇನ್ ವಾಯುಪಡೆ ತಿಳಿಸಿದೆ.