ನವದೆಹಲಿ: ಉತ್ತರ ಪ್ರದೇಶದಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಒಂಭತ್ತು ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುವುದು ಎಂದು ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸೋಮವಾರ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ನಡೆದ ಪ್ರಶ್ನೋತ್ತರ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಅವರು, 'ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ನಾಗರಿಕ ವಿಮಾನಯಾನ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ' ಎಂದಿದ್ದಾರೆ.
'ಸ್ವಾತಂತ್ರ್ಯ ನಂತರದ 65 ವರ್ಷಗಳಲ್ಲಿ ಕೇವಲ 74 ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕಳೆದ 9 ವರ್ಷಗಳಲ್ಲಿ 75 ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡಿದೆ. ಇದರಿಂದ ಒಟ್ಟು ವಿಮಾನ ನಿಲ್ದಾಣಗಳ ಸಂಖ್ಯೆ 149ಕ್ಕೆ ಏರಿದೆ. ಇದರಲ್ಲಿ ವಿಮಾನ ನಿಲ್ದಾಣ, ಹೆಲಿಪೋರ್ಟ್ ಹಾಗೂ ವಾಟರ್‌ಡ್ರೋಮ್ಸ್‌ಗಳು ಸೇರಿವೆ' ಎಂದಿದ್ದಾರೆ.
ಆರ್ಟಿಕಲ್ 370 ವಿಶೇಷ ಸ್ಥಾನಮಾನ ರದ್ದು ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್
'65 ವರ್ಷಗಳಲ್ಲಿ ಕೇವಲ ಮೂರು ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. 2014ರ ನಂತರದ ಮೋದಿ ಸರ್ಕಾರವು 12 ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಗಳನ್ನು ನಿರ್ಮಿಸಿದೆ. ಉತ್ತರ ಪ್ರದೇಶದಲ್ಲಿ ಕಳೆದ 9 ವರ್ಷಗಳಲ್ಲಿ ಮೂರು ಹೊಸ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ 9 ಹೊಸ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುವುದು. ಇದರಿಂದ ರಾಜ್ಯದಲ್ಲಿರುವ ಒಟ್ಟು ವಿಮಾನ ನಿಲ್ದಾಣಗಳ ಸಂಖ್ಯೆ 18ಕ್ಕೆ ಏರಿಕೆಯಾಗಲಿದೆ' ಎಂದು ಉತ್ತರಿಸಿದ್ದಾರೆ.
ಮೀರತ್ ವಿಮಾನ ನಿಲ್ದಾಣ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಿಂಧ್ಯಾ, 'ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ ಅಗತ್ಯವಿರುವ 115 ಎಕರೆ ಜಾಗವನ್ನು ನೀಡಿದ ನಂತರ ವಿಷುಯಲ್ ಫ್ಲೈಟ್ ರೇಟಿಂಗ್ (VFR) ಬಳಸುವ ಎಟಿಆರ್ ವಿಮಾನಗಳ ಹಾರಾಟವನ್ನು ಆರಂಭಿಸಲಾಗುವುದು' ಎಂದಿದ್ದಾರೆ.
'ಮೀರತ್ ವಿಮಾನ ನಿಲ್ದಾಣಕ್ಕೆ ಪರವಾನಗಿ ಇಲ್ಲ. ಉಡಾನ್ ಯೋಜನೆಯ ಪ್ರಾದೇಶಿಕ ಸಂಪರ್ಕ ಯೋಜನೆಯಡಿ ಮೂರನೇ ಸುತ್ತಿನ ಹರಾಜಿನಲ್ಲಿ ಗುರುತಿಸಲಾಗಿತ್ತು. ಹೀಗಾಗಿ ಉಡಾನ್ 4.2 ಸುತ್ತಿನಲ್ಲಿ ಮೀರತ್-ಲಖನೌ-ಮೀರತ್ ಮಾರ್ಗದಲ್ಲಿ ಫ್ಲೈಬಿಗ್‌ಗೆ 19 ಆಸನಗಳ ವಿಮಾನಗಳ ಹಾರಾಟಕ್ಕೆ ಅನುಮತಿ ನೀಡಲಾಗಿದೆ. ಇದರಿಂದ ವಾರಕ್ಕೆ 133 ಆಸನಗಳ ಹಾರಾಟ ಈ ಮಾರ್ಗದಲ್ಲಿ ನಡೆಯಲಿದೆ. ಆದರೆ ಎಟಿಆರ್ 72ಕ್ಕೆ ಇನ್ನೂ ಅವಕಾಶ ನೀಡಿಲ್ಲ. ಹೀಗಾಗಿ ಒಮ್ಮೆ ವಿಮಾನ ನಿಲ್ದಾಣ ಸಿದ್ಧಗೊಂಡ ನಂತರ ಹಾಗೂ ಪರವಾನಗಿ ಲಭ್ಯವಾದ ನಂತರ ಮೀರತ್ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಲಿದೆ' ಎಂದು ಪ್ರಶ್ನೆಗೆ ಸಿಂಧಿಯಾ ಉತ್ತರಿಸಿದ್ದಾರೆ.