ಕಾಸರಗೋಡು: ವಿವಿಧ ಬೇಡಿಕೆ ಮುಂದಿರಿಸಿ ವಿದ್ಯುತ್ ಇಲಾಖೆ ಕಾರ್ಮಿಕರ ಸಂಘಟನೆ ವಿದ್ಯುತ್ ಮಜ್ದೂರ್ ಸಂಘ ಬಿಎಂಎಸ್ ವತಿಯಿಂದ ವಿದ್ಯಾನಗರದ ವಿದ್ಯುತ್‍ಭವನ ಎದುರು ಧರಣಿ ನಡೆಸಲಾಯಿತು.
ಕೆಎಸ್‍ಇಬಿ ಕಾರ್ಮಿಕರಿಗೆ ಲಭಿಸಬೇಕಾದ ಡಿಎ, ಲೀವ್ ಸರಂಡರ್, ಬಡ್ತಿ ಲಭಿಸದಿರುವುದನ್ನು ಪ್ರತಿಭಟಿಸಿ ರಾಜ್ಯ ಇಂಧನ ಖಾತೆ ಸಚಿವರ ಅಧಿಕೃತ ನಿವಾಸಕ್ಕೆ 2024 ರ ಜನವರಿ 6 ರಂದು ನಡೆಯಲಿರುವ ಪ್ರತಿಭಟನಾ ಮೆರವಣಿಗೆಗೆ ಪೂರ್ವಭಾವಿಯಾಗಿ ವಿದ್ಯುತ್ ಭವನಗಳ ಮುಂದೆ ಧರಣಿ ಹಮ್ಮಿಕೊಳ್ಳಲಾಗಿತ್ತು.
ಬಿಎಂಎಸ್ ರಾಜ್ಯ ಸಮಿತಿ ಸದಸ್ಯ ವಿ.ವಿ ಬಾಲಕೃಷ್ಣನ್ ಧರಣಿ ಉದ್ಘಾಟಿಸಿ ಮಾತನಾಡಿ, ಹಣಕಾಸು ಭ್ರಷ್ಟಾಚಾರ, ಲೂಟಿಯಲ್ಲಿ ತೊಡಗಿರುವ ಎಡರಂಗ ಸರ್ಕಾರ ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಮುಚ್ಚುವ ಯತ್ನದ ಭಾಗವಾಗಿ ಸಾಮಾನ್ಯ ಜನರಿಗೆ ಪಿಂಚಣಿ ಮತ್ತು ಇತರ ಸೌಲಭ್ಯಗಳನ್ನು ನೀಡದೆ ವಂಚಿಸುತ್ತಿದೆ. ಕೆಎಸ್‍ಆರ್‍ಟಿಸಿ ಕಾರ್ಮಿಕರಿಗೆ ವೆತನ, ಡಿಎ ಸಏರಿದಂತೆ ವಿವಿಧ ಸವಲತ್ತು ನೀಡದೆ ವಂಚಿಸುತ್ತಾ ಬಂದಿರುವ ಸರ್ಕಾರ, ಪ್ರಸಕ್ತ ಕೆಎಸ್‍ಇಬಿಯನ್ನೂ ಇದೇ ಹಾದಿಗೆ ತೋಳ್ಳುತ್ತಿರುವುದು ಖಂಡನೀಯ. ಸುಳ್ಳು ಭರವಸೆಯೊಂದಿಗೆ ಅಧಿಕಾರಕ್ಕೇರಿದ ಎಡರಂಗ ಸರ್ಕಾರ, ಇಂದು ಕಾರ್ಮಿಕರನ್ನು ಶೋಷಣೆ ನಡೆಸುತ್ತಿದೆ. ಇಂತಹ ವಂಚನೆ, ವಿಶ್ವಾಸಘಾತುಕತನದ ವಿರುದ್ಧ ಭಾರತೀಯ ಮಜ್ದೂರ್ ಸಂಘದ ಕೇಸರಿ ಧ್ವಜದಡಿಯಲ್ಲಿ ಪ್ರಬಲ ಹೋರಾಟ ನಡೆಸುವ ಕಾಲ ಸನ್ನಿಹಿತವಾಗಿದೆ ಎಂದು ತಿಳಿಸಿದರು.
ಕೆವಿಎಂಎಸ್ ಜಿಲ್ಲಾ ಕಾರ್ಯಾಧ್ಯಕ್ಷ ವಸಂತನಾಯಕ್ ಮುಖ್ಯ ಭಾಷಣ ಮಾಡಿದರು. ಕೆವಿಎಂಎಸ್ ರಾಜ್ಯ ಉಪಾಧ್ಯಕ್ಷ ಕೆ.ಎನ್.ಕೃಷ್ಣನ್‍ಕುಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯದರ್ಶಿ ಶಶಿಧರನ್ ಕೆ ಸ್ವಾಗತಿಸಿದರು. ಜಿಲ್ಲಾ ಉಪಾಧ್ಯಕ್ಷ ಪ್ರವೀಣ್ ಎಚ್.ಪಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಜಂಟಿ ಕಾರ್ಯದರ್ಶಿ ಮುರಳಿ ಟಿ.ಪಿ ವಂದಿಸಿದರು.