ಪೂಂಛ್ : ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಮರುಸ್ಥಾಪಿಸುವ ಬಗ್ಗೆ ಹಾಗೂ ಅಲ್ಲಿನ ವಿಧಾನಸಭೆ ಚುನಾವಣೆ ವಿಳಂಬದ ಕುರಿತು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಕೇಂದ್ರಾಡಳಿತ ಪ್ರದೇಶದ ಜನರು ಆದಷ್ಟು ಬೇಗ ಚುನಾಯಿತ ಸರ್ಕಾರ ಬರಬೇಕೆಂದು ಬಯಸುತ್ತಾರೆ ಎಂದು ಅವರು ಹೇಳಿದ್ದಾರೆ.
'ಸರ್ಕಾರವು ಜಮ್ಮು ಮತ್ತು ಕಾಶ್ಮೀರದ ಜನರ ನಿರೀಕ್ಷೆಗಳು ಹಾಗೂ ಆಕಾಂಕ್ಷೆಗಳನ್ನು ಅರ್ಥಮಾಡಿಕೊಳ್ಳುತ್ತದೆ, ಸಾಧ್ಯವಾದಷ್ಟು ಬೇಗ ಚುನಾವಣೆಗಳನ್ನು ನಡೆಸುತ್ತದೆ ಎಂದು ನಾನು ಭಾವಿಸುತ್ತೇನೆ. ಜಮ್ಮುವಿನಲ್ಲಿ ಈ ಹಿಂದೆ 2014ರಲ್ಲಿ ಚುನಾವಣೆ ನಡೆದಿತ್ತು. ಮತ್ತೊಂದು ಚುನಾವಣೆಯಲ್ಲಿ ತಮ್ಮ ಮತ ಚಲಾಯಿಸಲು ಜನರು ಕಾತರದಿಂದ ಕಾಯುತ್ತಿದ್ದಾರೆ. ಮುಂಬರುವ ವರ್ಷದ ಸೆಪ್ಟೆಂಬರ್ ತಿಂಗಳೊಳಗೆ ಚುನಾವಣೆ ನಡೆಸುವಂತೆ ಚುನಾವಣಾ ಆಯೋಗವು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ ಎಂದು ಅಬ್ದುಲ್ಲಾ ಅವರು ಸುದ್ದಿಸಂಸ್ಥೆ 'ಎಎನ್‌ಐ'ಗೆ ತಿಳಿಸಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿಂಗ್ ಅವರು ಇದನ್ನು ಖುದ್ದಾಗಿ ಪರಿಶೀಲಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಕೇಂದ್ರಾಡಳಿತ ಪ್ರದೇಶವು ಚುನಾಯಿತ ಸರ್ಕಾರವನ್ನು ಬಯಸುತ್ತದೆ ಎಂದು ಮಾಜಿ ಸಿಎಂ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ ಕೇಂದ್ರ ಸರ್ಕಾರದ ಕ್ರಮವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು. ಅಲ್ಲದೆ, ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಗೆ ಚುನಾವಣೆ ನಡೆಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು.