ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ರಣತಂತ್ರ ರೂಪಿಸಲು 'ಇಂಡಿಯಾ' ಮೈತ್ರಿಕೂಟದ ನಾಯಕರು ಡಿ.6 ರಂದು ನವದೆಹಲಿಯಲ್ಲಿ ಸಭೆ ಸೇರಲಿದ್ದಾರೆ.
ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ನಡೆಯಲಿರುವ ಈ ಸಭೆ, ಕಳೆದ ಮೂರು ತಿಂಗಳಿನಿಂದ ನಿಷ್ಕ್ರಿಯವಾಗಿರುವ ವಿಪಕ್ಷಗಳ ಮೈತ್ರಿಯನ್ನು ಮತ್ತೆ ಹಳಿಗೆ ತರುವ ನಿಟ್ಟಿನಲ್ಲಿ ಮಹತ್ವ ಪಡೆದುಕೊಂಡಿದೆ.
ವಿಧಾನಸಭಾ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿರುವ ಕಾರಣ ಕಾಂಗ್ರೆಸ್ ಈ ಸಭೆಗೆ 'ಹುಮ್ಮಸ್ಸಿ'ನಿಂದ ಹೋಗುವ ಅವಕಾಶ ಕಳೆದುಕೊಂಡಿದೆ. ತೆಲಂಗಾಣದಲ್ಲಿ ಬಿಆರ್‌ಎಸ್ ಪಕ್ಷವನ್ನು 'ಮುಳುಗಿ'ಸಿದರೂ, ಇತರ ಮೂರು ರಾಜ್ಯಗಳಲ್ಲಿ ಬಿಜೆಪಿ ಜತೆಗಿನ ನೇರ ಹಣಾಹಣಿಯಲ್ಲಿ ಹಿನ್ನಡೆ ಉಂಟಾಗಿದೆ.
ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಬೇಗನೇ ಅಂತಿಮಗೊಳಿಸಬೇಕು ಎಂಬ ಒತ್ತಾಯ ಮೈತ್ರಿಕೂಟದಲ್ಲಿ ಕೇಳಿಬಂದಿತ್ತು. ಆದರೆ ಕಾಂಗ್ರೆಸ್ ಮಾತ್ರ ಅದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಐದು ರಾಜ್ಯಗಳ ಚುನಾವಣೆಯ ಫಲಿತಾಂಶ ಪಕ್ಷದ ಪರವಾಗಿ ಬಂದರೆ, ಸೀಟು ಹಂಚಿಕೆ ವೇಳೆ ಹೆಚ್ಚಿನ ಕ್ಷೇತ್ರಗಳಿಗೆ ಬೇಡಿಕೆಯಿಡುವುದು ಕಾಂಗ್ರೆಸ್‌ನ ಲೆಕ್ಕಾಚಾರವಾಗಿತ್ತು. ಪಕ್ಷವು ಇದೀಗ ಆ ಅವಕಾಶವನ್ನು ಕಳೆದುಕೊಂಡಿದೆ.
ಹಿಂದಿ ಭಾಷಿಕ ರಾಜ್ಯಗಳಲ್ಲಿ ಬಿಜೆಪಿಯನ್ನು ಎದುರಿಸುವ ಕಾಂಗ್ರೆಸ್‌ನ ಸಾಮರ್ಥ್ಯದ ಬಗ್ಗೆ ಈ ಫಲಿತಾಂಶ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಲೋಕಸಭೆ ಚುನಾವಣೆಗೆ ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಸೀಟು ಹಂಚಿಕೆ ವೇಳೆ ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ಆರ್‌ಜೆಡಿ ಮತ್ತು ಜೆಡಿಯು ಪಕ್ಷಗಳು ಇದನ್ನು ತನ್ನ 'ಚೌಕಾಸಿಯ ಅಸ್ತ್ರ'ವನ್ನಾಗಿಸುವ ಸಾಧ್ಯತೆಗಳಿವೆ.
'ಎಲ್ಲಾ ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ಪಕ್ಷಗಳಿಗೆ ಇದೊಂದು ಪಾಠವಾಗಿದೆ. ಬಿಜೆಪಿ ವಿರುದ್ಧ ಹೋರಾಡಲು ಒಗ್ಗಟ್ಟು ಅನಿವಾರ್ಯ. ಈಗ ಆಗಿರುವ ಬೆಳವಣಿಗೆಗಳಿಂದ ನಾವು ಸರಿಯಾದ ಪಾಠ ಕಲಿಯಬೇಕಿದೆ' ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜಾ ಹೇಳಿದ್ದಾರೆ.
ಮಧ್ಯಪ್ರದೇಶ, ಛತ್ತೀಸಗಢ ಮತ್ತು ರಾಜಸ್ಥಾನದಲ್ಲಿ ಬಿಜೆಪಿಗೆ ಹೆಚ್ಚಿನ ಲಾಭ ಆಗಿರುವುದರ ಜತೆ, ತೆಲಂಗಾಣದಲ್ಲೂ ತನ್ನ ಬಲ ವೃದ್ಧಿಸಿಕೊಂಡಿದೆ. ತೆಲಂಗಾಣದಲ್ಲಿ ದೊರೆತ ಗೆಲುವು ಲೋಕಸಭೆ ಚುನಾವಣೆ ವೇಳೆಗೆ ದಕ್ಷಿಣದ ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಭಾರಿ ಲಾಭವನ್ನೇನೂ ತರುವ ಸಾಧ್ಯತೆಯಿಲ್ಲ. ದಕ್ಷಿಣದ ರಾಜ್ಯಗಳು ಒಟ್ಟು 132 ಲೋಕಸಭಾ ಕ್ಷೇತ್ರಗಳನ್ನು ಹೊಂದಿವೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನವದೆಹಲಿಯ ನಿವಾಸದಲ್ಲಿ ಬುಧವಾರ ನಡೆಯಲಿರುವ ಸಭೆಯಲ್ಲಿ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶದ ಪರಾಮರ್ಶೆ ನಡೆಯಲಿದೆ. ಮುಂಬೈನಲ್ಲಿ ಆಯೋಜಿಸಿದ್ದ ಸಭೆಯ ಬಳಿಕದ ಮೂರು ತಿಂಗಳಲ್ಲಿ 'ಇಂಡಿಯಾ' ಮೈತ್ರಿಕೂಟದ ಯಾವುದೇ ಚಟುವಟಿಕೆ ನಡೆದಿಲ್ಲ. ಆದ್ದರಿಂದ ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳುಗಳಿರುವಂತೆ ಮೈತ್ರಿಕೂಟಕ್ಕೆ ಹುರುಪು ತುಂಬುವ ಸವಾಲು ನಾಯಕರ ಮುಂದಿದೆ.