ನವದೆಹಲಿ: ವಿಧಾನಸಭಾ ಚುನಾವಣೆಯಲ್ಲಿ ಆಗಿರುವ ಸೋಲಿನ ಹತಾಶೆಯನ್ನು ಸಂಸತ್ತಿನಲ್ಲಿ ತೋರಿಸಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷಗಳಲ್ಲಿ ಮನವಿ ಮಾಡಿದ್ದಾರೆ. ನಕಾರಾತ್ಮಕತೆಯನ್ನು ಬಿಟ್ಟು ಮುಂದಕ್ಕೆ ಸಾಗಬೇಕು, ಆಗ ವಿರೋಧ ಪಕ್ಷಗಳ ಬಗ್ಗೆ ಜನರು ಹೊಂದಿರುವ ಭಾವನೆಯು ಬದಲಾಗಬಹುದು ಎಂದು ಹೇಳಿದ್ದಾರೆ.
ಸಂಸತ್ ಭವನದ ಹೊರಗಡೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಮೋದಿ ಅವರು, 'ಈ ಅಧಿವೇಶನವು ವಿರೋಧ ಪಕ್ಷಗಳ ಪಾಲಿಗೆ ಸುವರ್ಣಾವಕಾಶ' ಎಂದರು. 'ನಕಾರಾತ್ಮಕತೆಯನ್ನು ದೇಶವು ತಿರಸ್ಕರಿಸಿದೆ. ಅಧಿವೇಶನದ ಆರಂಭದಲ್ಲಿ ನಾವು ವಿರೋಧ ಪಕ್ಷಗಳ ಸ್ನೇಹಿತರ ಜೊತೆ ಯಾವಾಗಲೂ ಮಾತುಕತೆ ನಡೆಸುತ್ತೇವೆ, ಎಲ್ಲರ ಸಹಕಾರ ಕೋರುತ್ತೇವೆ. ಈ ಬಾರಿಯೂ ಆ ಕೆಲಸ ಮಾಡಲಾಗಿದೆ' ಎಂದರು.
'ವಿಧಾನಸಭಾ ಚುನಾವಣೆಯ ಫಲಿತಾಂಶಗಳ ಆಧಾರದಲ್ಲಿ ಮಾತನಾಡುವುದಾದರೆ, ಇದು ವಿರೋಧ ಪಕ್ಷಗಳಲ್ಲಿನ ಸ್ನೇಹಿತರಿಗೆ ಸುವರ್ಣಾವಕಾಶ. ಸೋಲಿನ ಹತಾಶೆಯನ್ನು ತೋರಿಸಿಕೊಳ್ಳುವ ಆಲೋಚನೆ ಮಾಡುವುದರ ಬದಲು, ಅವರು ಸೋಲಿನಿಂದ ಪಾಠ ಕಲಿಯಬೇಕು. ಕಳೆದ ಒಂಬತ್ತು ವರ್ಷಗಳ ನಕಾರಾತ್ಮಕತೆಯನ್ನು ಹಿಂದಕ್ಕೆ ಬಿಡಬೇಕು. ಅವರು ಧನಾತ್ಮಕ ಭಾವನೆಯಿಂದ ಮುಂದೆ ಸಾಗಿದರೆ ದೇಶವು ಅವರ ಬಗ್ಗೆ ಹೊಂದಿರುವ ಧೋರಣೆಯನ್ನು ಬದಲಿಸಿಕೊಳ್ಳುತ್ತದೆ' ಎಂದು ಹೇಳಿದರು.
'ಅವರು ವಿರೋಧ ಪಕ್ಷದಲ್ಲಿ ಇದ್ದರೂ, ನಾನು ಅವರಿಗೆ ಒಳ್ಳೆಯ ಸಲಹೆಯನ್ನು ನೀಡುತ್ತಿದ್ದೇನೆ' ಎಂದು ಮೋದಿ ಅವರು ಹೇಳಿದರು.