ನವದೆಹಲಿ: ತೆಲಂಗಾಣದ ನೂತನ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಅವರು ಆಯ್ಕೆಯಾಗಿದ್ದಾರೆ.
ದೆಹಲಿಯಲ್ಲಿ ನಡೆದ ಕಾಂಗ್ರೆಸ್ ವರಿಷ್ಠರ ಸಭೆಯ ಬಳಿಕ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅವರು ರೇವಂತ್ ರೆಡ್ಡಿ ಅವರ ಹೆಸರು ಘೋಷಿಸಿದರು. ಈ ಕುರಿತು ಕಾಂಗ್ರೆಸ್ X ತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ.
'ರೇವಂತ್ ರೆಡ್ಡಿ ಅವರು ತೆಲಂಗಾಣದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದು, ಹೊಸ ಸಿಎಂ ಆಗಿ ಡಿಸೆಂಬರ್ 7 ರಂದು ಗುರುವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಂತಿಮ ತೀರ್ಮಾನ ಕೈಗೊಂಡರು' ಎಂದು ವೇಣುಗೋಪಾಲ್ ತಿಳಿಸಿದ್ದಾರೆ.
ಪ್ರಸ್ತುತ ರೇವಂತ್ ರೆಡ್ಡಿ ಅವರು 2021 ರಿಂದ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರೂ ಹೌದು. ತೆಲಂಗಾಣ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿರುವ ಅನುಮೂಲ ರೇವಂತ್ ರೆಡ್ಡಿ ಅವರಿಗೆ ಸೂಕ್ತ ಗೌರವ ಸಿಕ್ಕಿದೆ. ರೇವಂತ್ ಅವರಿಗೆ ಸಿಎಂ ಅಭ್ಯರ್ಥಿಯಾಗಿ ಪ್ರಬಲ ಸ್ಪರ್ಧೆ ಇರದಿದ್ದರಿಂದ ಅವರ ಆಯ್ಕೆ ಸರಳವಾಯಿತು ಎಂಬ ಮಾತುಗಳು ಕೇಳಿ ಬಂದಿವೆ.
1969ರ ನವೆಂಬರ್ 8 ರಂದು ಜನಿಸಿರುವ ರೇವಂತ್ ರೆಡ್ಡಿ ಅವರು (54 ವರ್ಷ ವಯಸ್ಸು) 2 ಬಾರಿ ಶಾಸಕರಾಗಿದ್ದಾರೆ. ಒಂದು ಬಾರಿ ಸಂಸದರಾಗಿದ್ದಾರೆ. 2017 ರಲ್ಲಿ ಟಿಡಿಪಿ ತೊರೆದು ಕಾಂಗ್ರೆಸ್ ಸೇರಿದ್ದರು. ಪ್ರಸ್ತುತ ವಿಕಾರಾಬಾದ್ ಜಿಲ್ಲೆಯ ಕೋಡಂಗಲ್ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಶಾಸಕರಾಗಿದ್ದಾರೆ.
ರೇವಂತ್ ರೆಡ್ಡಿ ಅವರು ಓಸ್ಮಾನಿಯಾ ವಿಶ್ವವಿದ್ಯಾಲಯದಿಂದ ಬಿ.ಎ ಪದವಿ ಪಡೆದಿದ್ದಾರೆ. ಅವರು 1992 ರಲ್ಲಿ ಮದುವೆಯಾಗಿದ್ದು ಪತ್ನಿ ಗೀತಾ, ಮಗಳು ನಿಮಿಷಾ ರೆಡ್ಡಿ.
119 ಸದಸ್ಯ ಬಲದ ತೆಲಂಗಾಣ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶ ಡಿಸೆಂಬರ್ 4ರಂದು ಪ್ರಕಟವಾಗಿತ್ತು. ಕಾಂಗ್ರೆಸ್ 64 ಕ್ಷೇತ್ರಗಳಲ್ಲಿ ಗೆದ್ದಿದ್ದರೆ, ಆಡಳಿತದಲ್ಲಿದ್ದ ಬಿಆರ್‌ಎಸ್ 39 ಸ್ಥಾನ ಗೆದ್ದಿತ್ತು. ಉಳಿದಂತೆ ಬಿಜೆಪಿ 8, ಎಐಎಂಐಎಂ 7 ಮತ್ತು ಸಿಪಿಐ 1 ಕಡೆ ಗೆಲುವು ಕಂಡಿವೆ.