ಕ್ಯಾಲಿಕಟ್: ಎಸ್‌ಎಫ್‌ಐ ಕಾರ್ಯಕರ್ತರ ತೀವ್ರ ಪ್ರತಿಭಟನೆಯ ನಡುವೆಯೇ ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಅವರು ಕ್ಯಾಲಿಕಟ್ ವಿಶ್ವವಿದ್ಯಾಲಯದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಶನಿವಾರ ಸಂಜೆ ವಿಶ್ವವಿದ್ಯಾಲಯಕ್ಕೆ ಬಂದರು.
ರಾಜ್ಯಪಾಲರು ವಿ.ವಿಗೆ ಬರುವುದಾಗಿ ತಿಳಿಸಿದ ಬೆನ್ನಲ್ಲೇ ವಿ.ವಿಯ ಸುತ್ತ ಜಮಾಯಿಸಿದ ಎಸ್‌ಎಫ್‌ಐ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿದರು.
' ಗೋ ಬ್ಯಾಕ್' ಎನ್ನುವ ಘೋಷಣೆಯೊಂದಿಗೆ ರಾಜ್ಯಪಾಲರನ್ನು ತಡೆಯಲು ತಯಾರಿ ನಡೆಸಿದ್ದರು. ಪೊಲೀಸ್ ಬಿಗಿ ಭದ್ರತೆಯೊಂದಿಗೆ ವಿ.ವಿಗೆ ಬಂದ ರಾಜ್ಯಪಾಲರು ಅಲ್ಲಿನ ಅತಿಥಿಗೃಹದಲ್ಲಿ ವಾಸ್ತವ್ಯ ಹೂಡಿದರು.
ವಿ.ವಿಯ ಒಳಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯಪಾಲರು, 'ನನಗೆ ಯಾರ ಭಯವೂ ಇಲ್ಲ. ಹೊರಗಿರುವವರೆಲ್ಲ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಳುಹಿಸಿರುವ ರೌಡಿಗಳು. ನನಗೆ ಯಾವುದೇ ಪ್ರತಿಭಟನೆ ಕಾಣಲಿಲ್ಲ' ಎಂದು ವ್ಯಂಗ್ಯವಾಡಿದರು.
'ಒಂದು ವೇಳೆ ಅವರು ನನ್ನ ಕಾರಿನ ಬಳಿ ಬಂದರೆ ತಕ್ಷಣ ನಾನು ಕಾರಿನಿಂದ ಇಳಿದು ಬಿಡುತ್ತೇನೆ. ಕಾರಿನ ಮೇಲೆ ದಾಳಿ ಮಾಡುವ ಬದಲು, ಅವರಿಗೆ ಧೈರ್ಯ ಇದ್ದರೆ ನನ್ನ ಮೆಲೆ ದಾಳಿ ಮಾಡಲಿ. ಅವರ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ' ಎಂದು ರಾಜ್ಯಪಲರು ಶನಿವಾರ ನವದೆಹಲಿಯಲ್ಲಿ ಎಚ್ಚರಿಕೆ ನೀಡಿದ್ದರು.
ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಬಂದಿದ್ದ ರಾಜ್ಯಪಾಲರು ಕೋಯಿಕ್ಕೋಡ್ ಸರ್ಕಾರಿ ಅತಿಥಿಗೃಹದಲ್ಲಿ ವಾಸ್ತವ್ಯ ಹೂಡಬೇಕಾಗಿತ್ತು. ಆದರೆ, ಎಸ್‌ಎಫ್‌ಐ ಸಂಘಟನೆ ರಾಜ್ಯಪಾಲರನ್ನು ಕ್ಯಾಲಿಕಟ್ ವಿಶ್ವವಿದ್ಯಾಲಯ ಪ್ರವೇಶಿಸಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ ಹಿನ್ನೆಲೆ ವಿಶ್ವವಿದ್ಯಾಲಯದಲ್ಲೇ ವಾಸ್ತವ್ಯ ಹೂಡುವುದಾಗಿ ರಾಜ್ಯಪಾಲರು ಶನಿವಾರ ಮಧ್ಯಾಹ್ನವೇ ತಿಳಿಸಿದ್ದರು.