ನವದೆಹಲಿ: 'ಇಂಡಿಯಾ' ಮೈತ್ರಿಕೂಟದ ಸಭೆಯನ್ನು ಏಕಪಕ್ಷೀಯವಾಗಿ ಕರೆದು ಪೇಚಿಗೆ ಸಿಲುಕಿರುವ ಕಾಂಗ್ರೆಸ್, ಪ್ರಮುಖ ವಿರೋಧ ಪಕ್ಷಗಳ ನಾಯಕರು ಈ ತಿಂಗಳ ಮೂರನೆಯ ವಾರದಲ್ಲಿ ದೆಹಲಿಯಲ್ಲಿ 'ತಮಗೆ ಅನುಕೂಲಕರವಾದ ಸಮಯದಲ್ಲಿ' ಸಭೆ ಸೇರಲಿದ್ದಾರೆ ಎಂದು ಮಂಗಳವಾರ ಹೇಳಿದೆ. ಈ ಮೂಲಕ ಆಗಿರುವ ಹಾನಿ ಸರಿಪಡಿಸಲು ಯತ್ನಿಸಿದೆ.
ಬುಧವಾರ ಇದೇ 6ರಂದು ನಡೆಯಲಿರುವುದು ಸಂಸತ್ತಿನ ಸದನಗಳ ನಾಯಕರ ಸಭೆ ಎಂದು ಕಾಂಗ್ರೆಸ್ ಹೇಳಿದೆ. ಬುಧವಾರದ ಸಭೆಗೆ ಬರಲು ತಮಗೆ ಆಗದು ಎಂದು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಮತ್ತು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ಸೋಮವಾರ ಹೇಳಿದ್ದರು. ತಮ್ಮನ್ನು ಸಂಪರ್ಕಿಸದೆಯೇ, ಸಭೆಗೆ ಬರಲು ಸಾಧ್ಯವೇ ಎಂಬುದನ್ನು ಕೇಳದೆಯೇ ಸಭೆಯ ದಿನಾಂಕ ನಿಗದಿ ಮಾಡಲಾಗಿದೆ ಎಂದು ಅವರು ಹೇಳಿದ್ದರು.
ತಮಿಳುನಾಡಿನಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ತಾವು ರಾಜ್ಯದಲ್ಲಿ ಇರಬೇಕಾಗುತ್ತದೆ, ಸಭೆಗೆ ಬರಲು ಸಾಧ್ಯವಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಹೇಳಿದ್ದು ಕೂಡ 'ಇಂಡಿಯಾ' ಗುಂಪಿನ ಸಭೆಯ ದಿನಾಂಕ ಬದಲಾಯಿಸಲು ಒಂದು ಕಾರಣ ಎಂದು ಮೂಲಗಳು ವಿವರಿಸಿವೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸಭೆಗೆ ಬರುವುದನ್ನು ಅನಾರೋಗ್ಯದ ಕಾರಣದಿಂದಾಗಿ ಖಚಿತಪಡಿಸಿರಲಿಲ್ಲ. ಸ್ಟಾಲಿನ್ ಮತ್ತು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಸಭೆಯ ದಿನಾಂಕವನ್ನು ಬದಲು ಮಾಡಬೇಕು ಎಂದು ಕೋರಿದ್ದರು.
'ಇಂಡಿಯಾ ಮೈತ್ರಿಕೂಟದ ಸಂಸದೀಯ ಪಕ್ಷದ ನಾಯಕರ ಸಭೆಯು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಡಿಸೆಂಬರ್ 6ರಂದು ನಡೆಯಲಿದೆ. ಅದಾದ ನಂತರ, ಪಕ್ಷದ ಅಧ್ಯಕ್ಷರು ಹಾಗೂ ಇಂಡಿಯಾ ಮೈತ್ರಿಕೂಟದ ಮುಖ್ಯಸ್ಥರ ಸಭೆಯು ಡಿಸೆಂಬರ್ ಮೂರನೆಯ ವಾರದಲ್ಲಿ ಎಲ್ಲರಿಗೂ ಅನುಕೂಲವಾಗುವ ದಿನ ನಡೆಯಲಿದೆ' ಎಂದು ಎಐಸಿಸಿ ಅಧ್ಯಕ್ಷ ಕಚೇರಿಯ ಸಂಯೋಜಕ ಗುರ್ದೀಪ್ ಸಿಂಗ್ ಸಪ್ಪಲ್ 'ಎಕ್ಸ್' ವೇದಿಕೆಯಲ್ಲಿ ಬರೆದಿದ್ದಾರೆ.
ಐದು ರಾಜ್ಯಗಳ ಚುನಾವಣೆ ಹತ್ತಿರವಾಗುತ್ತಿದ್ದಾಗ ಮೂರು ತಿಂಗಳು ಸುಮ್ಮನೆ ಇದ್ದು, ಇದ್ದಕ್ಕಿದ್ದಂತೆ ಡಿಸೆಂಬರ್ 6ಕ್ಕೆ ಸಭೆ ಕರೆಯುತ್ತಿರುವುದಾಗಿ ಹೇಳಿದ ಕಾಂಗ್ರೆಸ್ಸಿನ ಕ್ರಮಕ್ಕೆ ಆಕ್ಷೇಪ ವ್ಯಕ್ತವಾಗಿತ್ತು.
'ಇದು ಮೈತ್ರಿ ರಾಜಕಾರಣ ಮಾಡುವ ಬಗೆ ಅಲ್ಲ. ಸಭೆ ಕರೆಯುವ ಮೊದಲು ಸರಿಯಾಗಿ ಸಮಾಲೋಚನೆ ನಡೆಸಬೇಕಿತ್ತು' ಎಂದು ಕಾಂಗ್ರೆಸ್ಸಿನ ಹಿರಿಯ ನಾಯಕರೊಬ್ಬರು 'ಪ್ರಜಾವಾಣಿ' ಜೊತೆ ಅನಿಸಿಕೆ ಹಂಚಿಕೊಂಡರು. ಆದರೆ ಕಾಂಗ್ರೆಸ್ ಪಕ್ಷವು ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ. ಸಭೆಯು ಅನೌಪಚಾರಿಕವಾಗಿರುತ್ತದೆ, ಎಲ್ಲ ನಾಯಕರಿಗೂ ಸಭೆಗೆ ಬರಲು ಸಾಧ್ಯವಾಗದೆ ಇರಬಹುದು ಎಂಬುದು ಮೊದಲೇ ಗೊತ್ತಿತ್ತು ಎಂದು ಪಕ್ಷ ಹೇಳಿದೆ.
ಸಭೆಯ ಬಗ್ಗೆ ತಮಗೆ ಮೊದಲೇ ಮಾಹಿತಿ ಇರಲಿಲ್ಲ. ಮಾಹಿತಿ ಇದ್ದಿದ್ದರೆ ಉತ್ತರ ಬಂಗಾಳದಲ್ಲಿ ಸಭೆಯೊಂದನ್ನು ತಾವು ನಿಗದಿ ಮಾಡುತ್ತಿರಲಿಲ್ಲ ಎಂದು ಮಮತಾ ಅವರು ಸೋಮವಾರ ಹೇಳಿದ್ದರು.