ಉಪ್ಪಳ: ಮಂಜೇಶ್ವರ ಶಾಸಕರ ನಿರಂತರ ವಿದೇಶ ಯಾತ್ರೆ ಯಾವ ಉದ್ದೇಶಕ್ಕಾಗಿ ಎಂದು ನಾಡಿನ ಜನತೆಗೆ ತಿಳಿಯಬೇಕು. ರಾಜ್ಯ ಸರ್ಕಾರ ಮಂಜೇಶ್ವರವನ್ನು ನಿರಂತರವಾಗಿ ಅವಗಣಿಸುತ್ತಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುಧಾಮ ಗೋಸಾಡ ಪ್ರಶ್ನಿಸಿದರು.
ಪೆರ್ಮುದೆ ಪೇಟೆಯಲ್ಲಿ ಗುರುವಾರ ನಡೆದ ಬಿಜೆಪಿ ಪೈವಳಿಕೆ ದಕ್ಷಿಣ ವಲಯ ಸಮಿತಿ ಹಮ್ಮಿಕೊಂಡ ‘ಜನ ಪಂಚಾಯತ್’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪೈವಳಿಕೆಯಲ್ಲಿ ನವ ಕೇರಳ ಸಮಾವೇಶ ಉದ್ಘಾಟಿಸಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಯಾವುದೇ ನೈತಿಕತೆ ಇಲ್ಲ. ಕಳೆದ ಐದು ತಿಂಗಳುಗಳಿಂದ ಪೈವಳಿಕೆ ಪಂಚಾಯತಿ ಕಾರ್ಯಾಲಯದಲ್ಲಿ ಕಾರ್ಯದರ್ಶಿಯೇ ಇದ್ದಿರಲಿಲ್ಲ. ಅಗತ್ಯ ಅಧಿಕಾರಿಗಳು, ನೌಕರರು ಇರದಿದ್ದರಿಂದ ಪಂಚಾಯತಿಯಲ್ಲಿ ಯೋಜನೆಗಳು, ಫಂಡ್ ಗಳು ನಷ್ಟವಾಗಿರುವ ಬಗ್ಗೆ ಗಂಭೀರ ಚಿಂತನೆ ಮಾಡಬೇಕು ಎಂದವರು ಎಚ್ಚರಿಸಿದರು.
ವಿಘ್ನೇಶ್ವರ ಮಾಸ್ತರ್ ಕೆದುಕೋಡಿ ಅಧ್ಯಕ್ಷತೆ ವಹಿಸಿದ್ದರು. ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ., ಮುಖಂಡರಾದ ಮಣಿಕಂಠ ರೈ ಪಟ್ಲ, ಅಶ್ವಿನಿ ಪಜ್ವ, ಎ.ಕೆ.ಕಯ್ಯಾರು, ಸುಬ್ರಮಣ್ಯ ಭಟ್ ಆಟಿಕುಕ್ಕೆ, ಬಾಲಕೃಷ್ಣ, ಚಂದ್ರಾವತಿ, ಸದಾಶಿವ ಚೇರಾಲು ಮೊದಲಾದವರು ನೇತೃತ್ವ ನೀಡಿದರು. ಸತೀಶ ಸ್ವಾಗತಿಸಿ, ಪ್ರಶಾಂತ್ ಜೋಡುಕಲ್ಲು ವಂದಿಸಿದರು.