ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿ.ಆರ್.ಗವಾಯಿ ಮತ್ತು ಸೂರ್ಯಕಾಂತ್ ಅವರನ್ನೊಳಗೊಂಡ ಸಂವಿಧಾನ ಪೀಠವು ಈ ತೀರ್ಪು ಪ್ರಕಟಿಸಿದೆ.
'ಸಂವಿಧಾನದ 370 ನೇ ವಿಧಿಯಡಿ ಇದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಲು ರಾಷ್ಟ್ರಪತಿಯವರು ಸಾಂವಿಧಾನಿಕ ಆದೇಶ ಹೊರಡಿಸುವ ಅಧಿಕಾರ ಹೊಂದಿದ್ದಾರೆ' ಎಂದು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠ ಹೇಳಿದೆ.
'ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಶೀಘ್ರವೇ ಮರುಸ್ಥಾಪಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಲಾಗುವುದು. ಹಾಗೆಯೇ, ಅಲ್ಲಿನ ವಿಧಾನಸಭೆಗೆ 2024ರ ಸೆಪ್ಟೆಂಬರ್ 30ರ ಒಳಗೆ ಚುನಾವಣೆ ನಡೆಸಲು ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಲಾಗುವುದು' ಎಂದು ತೀರ್ಪು ಪ್ರಕಟಿಸುವ ವೇಳೆ ಸಿಜೆಐ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370ನೇ ವಿಧಿಗೆ ಸಂಬಂಧಿಸಿದ ಪ್ರಮುಖ ಅಂಶಗಳು ಇಲ್ಲಿವೆ.
ಏನಿದು 370ನೇ ವಿಧಿ?
ಸದ್ಯ ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯು ತಾತ್ಕಾಲಿಕ ನಿಬಂಧನೆ ಅನುಸಾರ ವಿಶೇಷ ಸ್ಥಾನಮಾನವನ್ನು ಕಲ್ಪಿಸಿತ್ತು. ಅದರಂತೆ, ಜಮ್ಮು ಮತ್ತು ಕಾಶ್ಮೀರವು ತನ್ನದೇ ಸಂವಿಧಾನ, ಪ್ರತ್ಯೇಕ ಧ್ವಜ ಹಾಗೂ ಭಾರತ ಸರ್ಕಾರದ ಸೀಮಿತ ಹಸ್ತಕ್ಷೇಪವನ್ನು ಹೊಂದಿತ್ತು.
ರಕ್ಷಣೆ, ವಿದೇಶಾಂಗ ವ್ಯವಹಾರ, ಹಣಕಾಸು ಮತ್ತು ಸಂವಹನವನ್ನು ಹೊರತುಪಡಿಸಿದ ಯಾವುದೇ ಕಾನೂನನ್ನು ಜಾರಿಗೊಳಿಸಲು ಕೇಂದ್ರವು, ಅಲ್ಲಿನ ರಾಜ್ಯ ಸರ್ಕಾರದ ಅನುಮತಿ ಪಡೆಯಬೇಕಿತ್ತು.
ಅಲ್ಲಿನ ನಾಗರಿಕರು ಈ ವಿಧಿಯ ಅನುಸಾರ ಪೌರತ್ವ, ಆಸ್ತಿ ಹಕ್ಕು ಮತ್ತು ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದ ಪ್ರತ್ಯೇಕ ಕಾನೂನುಗಳನ್ನು ಹೊಂದಿದ್ದರು. ದೇಶದ ಬೇರೆ ಯಾವುದೇ ರಾಜ್ಯದ ಜನರು ಅಲ್ಲಿ ಭೂಮಿ ಅಥವಾ ಆಸ್ತಿ ಖರೀದಿಸುವುದು ಅಸಾಧ್ಯವಾಗಿತ್ತು. ಅದಷ್ಟೇ ಅಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ ಆಂತರಿಕ ಅಶಾಂತಿ ಉಂಟಾದರೂ, ರಾಜ್ಯ ಸರ್ಕಾರದ ಅನುಮತಿ ಇಲ್ಲದೆ ತುರ್ತು ಪರಿಸ್ಥಿತಿ ಘೋಷಿಸುವ ಅಧಿಕಾರ ಸಹ ಕೇಂದ್ರ ಸರ್ಕಾರಕ್ಕೆ ಇರಲಿಲ್ಲ.
ಅಸ್ತಿತ್ವಕ್ಕೆ ಬಂದದ್ದು ಯಾವಾಗ?ಮಹಾರಾಜ ಹರಿ ಸಿಂಗ್ ಮತ್ತು ಭಾರತದ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಜಮ್ಮು ಮತ್ತು ಕಾಶ್ಮಿರ ಪ್ರಧಾನಿಯಾಗಿ ನೇಮಿಸಿದ್ದ ಶೇಕ್ ಅಬ್ದುಲ್ಲಾ ಅವರು 1947ರಲ್ಲಿ 370ನೇ ವಿಧಿಯನ್ನು ರಚಿಸಿದರು. ಅಬ್ದುಲ್ಲಾ ಭಾರತ ಸಂವಿಧಾನ ಸಭೆಯೊಂದಿಗೆ ನಿರಂತರವಾಗಿ ನಡೆಸಿದ ಮಾತುಕತೆಗಳ ಬಳಿಕ, 1949ರಲ್ಲಿ ಈ ವಿಧಿಯನ್ನು ಭಾರತ ಸಂವಿಧಾನದಲ್ಲಿ ಅಳವಡಿಸಿಕೊಳ್ಳಲಾಯಿತು.
ಸ್ಥಾನಮಾನ ರದ್ದು ಯಾವಾಗ?
ಸಂವಿಧಾನದ 370ನೇ ವಿಧಿ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಕಲ್ಪಿಸಿದ್ದ ವಿಶೇಷ ಸ್ಥಾನಮಾನವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು, 2019ರ ಆಗಸ್ಟ್ 5ರಂದು ರದ್ದುಪಡಿಸಿದೆ. ಹಾಗೆಯೇ, ರಾಜ್ಯವನ್ನು 'ಜಮ್ಮು ಮತ್ತು ಕಾಶ್ಮೀರ' ಹಾಗೂ 'ಲಡಾಖ್' ಎಂದು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದೆ.
ಸ್ಥಾನಮಾನ ರದ್ದು ವಿರೋಧಿಸುವವರ ವಾದವೇನು?
ವಿಶೇಷ ಸ್ಥಾನಮಾನ ರದ್ದು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿರುವ ಕೆಲವರು, ಜಮ್ಮು ಮತ್ತು ಕಾಶ್ಮೀರದ ಸಂವಿಧಾನ ರಚನಾ ಸಭೆಯ ಅವಧಿಯು 1957ರಲ್ಲಿ ಕೊನೆಗೊಂಡ ಬಳಿಕ 370ನೇ ವಿಧಿ ಅಡಿ ಇದ್ದ ಸ್ಥಾನಮಾನವೂ ರದ್ದಾಗುತ್ತದೆ ಎಂಬ ವಾದವನ್ನು ವಿರೋಧಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಸಂವಿಧಾನ ರಚನಾ ಸಭೆಯ ಅವಧಿ ಮುಗಿಯುವ ಮುನ್ನವೇ 370ನೇ ವಿಧಿಗೆ ಸಂವಿಧಾನದಲ್ಲಿ ಶಾಶ್ವತ ಸ್ಥಾನ ಕಲ್ಪಿಸಲಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ವಿಶೇಷ ಸ್ಥಾನಮಾನ ರದ್ದು ಕ್ರಮವು ಪ್ರಾದೇಶಿಕ ಸ್ವಾಯತ್ತತೆ ಮತ್ತು ಜನಸಂಖ್ಯೆಯ ಮೇಲೆ ಪರಿಣಾಮ ಉಂಟುಮಾಡಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರದ ಸಮರ್ಥನೆ ಏನು?
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂಪಡೆಯುವಾಗ ಯಾವುದೇ 'ಅಸಾಂವಿಧಾನಿಕ ಕ್ರಮ' ಅನುಸರಿಸಿಲ್ಲ ಎಂದಿರುವ ಕೇಂದ್ರ ಸರ್ಕಾರ, ಪ್ರಾದೇಶಿಕ ಅಭಿವೃದ್ಧಿಗೆ ಹಿಂದಿನ ಕಾನೂನು ಅಡ್ಡಿಪಡಿಸುತ್ತಿತ್ತು ಎಂದು ವಾದಿಸಿದೆ. ವಿಶೇಷ ಸ್ಥಾನಮಾನ ರದ್ದುಪಡಿಸಿದ ಬಳಿಕ ಈ ಭಾಗದಲ್ಲಿ ಭಯೋತ್ಪಾದನೆ ಚಟುವಟಿಕೆ, ಕಲ್ಲು ತೂರಾಟ ಪ್ರಕರಣಗಳು, ಸೇನಾ ಸಿಬ್ಬಂದಿ ಸಾವಿನ ಪ್ರಕರಣಗಳು ಕಡಿಮೆಯಾಗಿವೆ ಎಂಬ ಸಮರ್ಥನೆಗಳನ್ನೂ ನೀಡಿದೆ.
ಕೋರ್ಟ್‌ನಲ್ಲಿನ ಬೆಳವಣಿಗೆಗಳು
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು, ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಕಾಯ್ದೆಯ ಸಿಂಧುತ್ವ, 2018ರ ಜೂನ್ 20 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯಪಾಲರ ಆಳ್ವಿಕೆ ಹೇರಿದ್ದು ಮತ್ತು 2018ರ ಡಿಸೆಂಬರ್ 18ರ ಬಳಿಕ ರಾಷ್ಟಪತಿ ಆಳ್ವಿಕೆ ಜಾರಿಗೊಳಿಸಿದ ವಿಷಯಗಳ ಸಂಬಂಧವಾಗಿಯೂ ಕೋರ್ಟ್‌ನಲ್ಲಿ ವಾದ-ಪ್ರತಿವಾದಗಳು ನಡೆದಿವೆ.
ಪ್ರಕರಣದ ವಿಚಾರಣೆ ಆಗಸ್ಟ್ 2ರಂದು ಆರಂಭವಾಗಿದೆ. ಕೇಂದ್ರ ಸರ್ಕಾರದ ನಿರ್ಧಾರ ಸಮರ್ಥಿಸಿ ಅಟಾರ್ನಿ ಜನರಲ್ ಆರ್. ವೆಂಕಟರಮಣಿ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹಿರಿಯ ವಕೀಲರಾದ ಹರೀಶ್ ಸಾಳ್ವೆ, ರಾಕೇಶ್ ದ್ವಿವೇದಿ, ವಿ. ಗಿರಿ ಮತ್ತು ಇತರರು ವಾದಿಸಿದ್ದಾರೆ.
ಹಿರಿಯ ವಕೀಲರಾದ ಕಪಿಲ್ ಸಿಬಲ್, ರಾಜೀವ್ ಧವನ್, ಗೋಪಾಲ್ ಸುಬ್ರಮಣಿಯಂ, ದುಷ್ಯಂತ್ ದವೆ, ಜಾಫರ್ ಷಾ, ಗೋಪಾಲ್ ಶಂಕರನಾರಾಯಣನ್ ಅರ್ಜಿದಾರರ ಪರ ವಾದ ಮಂಡಿಸಿದ್ದಾರೆ.
ಯಾವುದೇ ಸಾಂವಿಧಾನಿಕ ಸಭೆ ಅಥವಾ ಸಹಮತವಿಲ್ಲದ ಹೊರತಾಗಿಯೂ ಜಮ್ಮು ಮತ್ತು ಕಾಶ್ಮೀರದಲ್ಲಿ ಇಂತಹ ಕ್ರಮಕ್ಕೆ ಶಿಫಾರಸು ಮಾಡಿದ್ದು ಯಾರು ಎಂದು ವಿಚಾರಣೆ ವೇಳೆ ಸರ್ಕಾರವನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
ಜಮ್ಮು ಮತ್ತು ಕಾಶ್ಮೀರ ಸಂವಿಧಾನ ಸಭೆಯ ಅವಧಿ 1957ರಲ್ಲಿ ಮುಕ್ತಾಯವಾದ ಬಳಿಕ, ಸಂವಿಧಾನದಲ್ಲಿ ತಾತ್ಕಾಲಿಕ ಎಂದು ನಿರ್ದಿಷ್ಟವಾಗಿ ಉಲ್ಲೇಖಿಸಲಾದ ನಿಬಂಧನೆಯು (370ನೇ ವಿಧಿ) ಹೇಗೆ ಶಾಶ್ವತವಾಗಿ ಜಾರಿಯಾಗುತ್ತದೆ ಎಂದೂ ಕೇಳಿದೆ.