ನವದೆಹಲಿ: ರಾಜ್ಯಗಳ ಅನುಮತಿ ಹಾಗೂ ಹಸ್ತಕ್ಷೇಪ ಇಲ್ಲದೆಯೇ ಯಾವುದೇ ಪ್ರಕರಣ ಕುರಿತು ತನಿಖೆ ನಡೆಸುವುದಕ್ಕೆ ಸಿಬಿಐಗೆ ವ್ಯಾಪಕ ಅಧಿಕಾರ ನೀಡಬೇಕು. ಈ ಸಂಬಂಧ ಹೊಸ ಕಾನೂನು ರಚಿಸುವ ತುರ್ತು ಅಗತ್ಯ ಇದೆ ಎಂದು ಸಂಸದೀಯ ಸಮಿತಿಯೊಂದು ಸೋಮವಾರ ಹೇಳಿದೆ.
ಪ್ರಮುಖ ಪ್ರಕರಣಗಳ ಕುರಿತು ತನಿಖೆ ನಡೆಸುವುದಕ್ಕಾಗಿ ಕೆಲವು ರಾಜ್ಯಗಳು ಸಿಬಿಐಗೆ ನೀಡಿರುವ ಅನುಮತಿಯನ್ನು ಹಿಂಪಡೆದಿವೆ.
ಜೊತೆಗೆ, ಸಿಬಿಐ ಕಾರ್ಯವೈಖರಿಯು ವಸ್ತುನಿಷ್ಠ ಹಾಗೂ ನಿಷ್ಪಕ್ಷಪಾತದಿಂದ ಕೂಡಿರುವಂತೆ ನೋಡಿಕೊಳ್ಳಲು ಕೆಲ ಕ್ರಮಗಳನ್ನು ಕೈಗೊಳ್ಳಬೇಕು. ಹೀಗೆ ಮಾಡುವುದರಿಂದ, ತಮ್ಮ ವಿರುದ್ಧ ತಾರತಮ್ಯ ಮಾಡುತ್ತಿಲ್ಲ ಎಂಬ ಭಾವನೆ ರಾಜ್ಯಗಳಲ್ಲಿಯೂ ಮೂಡುತ್ತದೆ ಎಂದು ಸಿಬ್ಬಂದಿ, ಸಾರ್ವಜನಿಕ ದೂರುಗಳು, ಕಾನೂನು ಮತ್ತು ನ್ಯಾಯ ಕುರಿತ ಸಂಸದೀಯ ಸ್ಥಾಯಿ ಸಮಿತಿಯು ಸಂಸತ್‌ನಲ್ಲಿ ಮಂಡಿಸಿರುವ ವರದಿಯಲ್ಲಿ ಹೇಳಲಾಗಿದೆ.
ದೆಹಲಿ ವಿಶೇಷ ಪೊಲೀಸ್ ಎಸ್ಟಾಬ್ಲಿಷ್‌ಮೆಂಟ್ ಕಾಯ್ದೆ (ಡಿಎಸ್‌ಪಿಇ) ಅಡಿ ಸಿಬಿಐ ಕಾರ್ಯ ನಿರ್ವಹಿಸುತ್ತಿದೆ. ಸಿಬಿಐ ತನಿಖೆ ನಡೆಸಬೇಕು ಎಂದಾದಲ್ಲಿ, ಸಂಬಂಧಪಟ್ಟ ರಾಜ್ಯದ ಅನುಮತಿ ಕಡ್ಡಾಯ ಎಂದು ಈ ಕಾಯ್ದೆ ಹೇಳುತ್ತದೆ.
ಕೆಲ ಪ್ರಕರಣಗಳ ಕುರಿತು ತನಿಖೆ ನಡೆಸುವುದಕ್ಕೆ ಸಂಬಂಧಿಸಿ, 9 ರಾಜ್ಯಗಳು ಸಿಬಿಐಗೆ ನೀಡಿದ್ದ ಅನುಮತಿಯನ್ನು ಹಿಂಪಡೆದಿವೆ ಎಂದೂ ಸ್ಥಾಯಿ ಸಮಿತಿ ವರದಿಯಲ್ಲಿ ಹೇಳಲಾಗಿದೆ.
'ರಾಜ್ಯಗಳು ತಾವು ನೀಡಿದ ಅನುಮತಿಯನ್ನು ಹಿಂಪಡೆದಿರುವ ಕ್ರಮವು, ತನಿಖೆ ನಡೆಸುವುದಕ್ಕೆ ಸಂಬಂಧಿಸಿ ಸಿಬಿಐ ಹೊಂದಿರುವ ಅಧಿಕಾರದ ಮೇಲೆ ಮಿತಿ ಹೇರುತ್ತದೆ. ಇದು ಸಂಬಂಧಪಟ್ಟ ರಾಜ್ಯಗಳಲ್ಲಿ ಭ್ರಷ್ಟಾಚಾರ ಹಾಗೂ ಸಂಘಟಿತ ಅಪರಾಧಗಳು ಹೆಚ್ಚಳವಾಗಲು ಕಾರಣವಾಗುತ್ತದೆ' ಎಂದು ಸಮಿತಿಯು ವರದಿಯಲ್ಲಿ ಹೇಳಿದ್ದು, 9 ರಾಜ್ಯಗಳು ಅನುಮತಿ ಹಿಂಪಡೆದಿರುವುದನ್ನು ಉಲ್ಲೇಖಿಸಿದೆ.
ಡಿಎಸ್‌ಪಿಇ ಕಾಯ್ದೆ ಜೊತೆಗೆ, ರಾಜ್ಯಗಳ ಅನುಮತಿ ಹಾಗೂ ಹಸ್ತಕ್ಷೇಪ ಇಲ್ಲದೆಯೇ ತನಿಖೆ ನಡೆಸುವುದಕ್ಕೆ ಸಿಬಿಐಗೆ ಹೆಚ್ಚು ಅಧಿಕಾರ ನೀಡುವ ಹೊಸ ಕಾಯ್ದೆಯನ್ನು ರಚಿಸುವ ಅಗತ್ಯವಿದೆ ಎಂದು ಸಮಿತಿ ಹೇಳಿದೆ.