ಇಂದೋರ್ : ಹೊಸದಾಗಿ ನಿರ್ಮಿಸಲಾಗಿದ್ದ ಹಳಿ ಮೇಲೆ ಪರೀಕ್ಷಾರ್ಥವಾಗಿ ಸಂಚರಿಸುತ್ತಿದ್ದ ರೈಲಿಗೆ ಸಿಲುಕಿ 10 ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಇಂದೋರ್ ಜಿಲ್ಲೆಯಲ್ಲಿ ಗುರುವಾರ ಸಂಭವಿಸಿದೆ.
ಈ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ವಿದ್ಯಾರ್ಥಿಗಳ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.
ಮೃತ ವಿದ್ಯಾರ್ಥಿನಿಯರನ್ನು ಬಬ್ಲಿ ಮಸಾರೆ (17) ಹಾಗೂ ರಾಧಿಕಾ ಭಾಸ್ಕರ್ (17) ಎಂದು ಗುರುತಿಸಲಾಗಿದೆ.
ಗುರುವಾರ ಸಂಜೆ ಟ್ಯೂಷನ್ ಮುಗಿಸಿಕೊಂಡು ವಾಪಸ್ ಮನೆಗೆ ಹೋಗುತ್ತಿದ್ದ ಈ ವಿದ್ಯಾರ್ಥಿನಿಯರು ಕೈಲೋದ್ ಹಾಲಾ ಎಂಬ ಪ್ರದೇಶದ ಬಳಿ ಈಚೆಗೆ ನಿರ್ಮಿಸಲಾಗಿದ್ದ ರೈಲು ಹಳಿಯನ್ನು ದಾಟುತ್ತಿದ್ದರು. ಈ ವೇಳೆ ಇದೇ ಹಳಿಯಲ್ಲಿ ಪರೀಕ್ಷಾರ್ಥವಾಗಿ ಸಂಚರಿಸುತ್ತಿದ್ದ ರೈಲು ಡಿಕ್ಕಿಯಾಗಿ ವಿದ್ಯಾರ್ಥಿನಿಯರು ಸ್ಥಳದಲ್ಲೇ ಮೃತರಾಗಿದ್ದಾರೆ.
ಈ ಮಾರ್ಗದಲ್ಲಿ ಮೊದಲು ಸಂಚರಿಸಿದ್ದ ರೈಲು ಇದಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಶ್ವಿನಿ ವೈಷ್ಣವ್ ಅವರ ಆದೇಶದ ಅನುಸಾರ ರೈಲ್ವೆ ರಕ್ಷಣಾ ಪಡೆಯ ಪೊಲೀಸರು (RPF) ತನಿಖೆ ನಡೆಸಲಿದ್ದಾರೆ ಎಂದು ವಿಭಾಗೀಯ ರೈಲ್ವೆ ಮ್ಯಾನೇಜರ್ ರಜನೀಶ್ ಕುಮಾರ್ ತಿಳಿಸಿದ್ದಾರೆ.