HEALTH TIPS

ತಾಜ್‌ಮಹಲ್‌ಗಿಂತಲೂ ಸುಂದರ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಮಸೀದಿ: ಹಾಜಿ ಶೇಖ್

               ಮುಂಬೈ: 'ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿರುವ ಮೊಹಮ್ಮದ್ ಬಿನ್ ಅಬ್ದುಲ್ಲಾ ಮಸೀದಿಯು ವಿಶ್ವದ ಅದ್ಭುತಗಳಲ್ಲಿ ಒಂದಾದ ತಾಜ್‌ ಮಹಲ್‌ಗಿಂತಲೂ ಸುಂದರವಾಗಿರಲಿದೆ' ಎಂದು ಅಯೋಧ್ಯೆ ಮಸೀದಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹಾಜಿ ಅರ್ಫಾತ್ ಶೇಖ್ ಹೇಳಿದ್ದಾರೆ.

              ಮಸೀದಿ ನಿರ್ಮಾಣ ಕುರಿತು ಸುದ್ದಿಗಾರೊಂದಿಗೆ ಶುಕ್ರವಾರ ಮಾಹಿತಿ ನೀಡಿರುವ ಅವರು, 'ಅಯೋಧ್ಯೆಯಲ್ಲಿ ನಿರ್ಮಿಸಲಿರುವ ಮೊಹಮ್ಮದ್ ಬಿನ್ ಅಬ್ದುಲ್ಲಾ ಮಸೀದಿಗೆ ಮುಂದಿನ ವರ್ಷ ಅಡಿಗಲ್ಲು ಸಮಾರಂಭ ನಡೆಯಲಿದ್ದು, ಇದಕ್ಕೆ ಸಂತರು, ಪೀರರು ಹಾಗೂ ಧರ್ಮಗುರುಗಳನ್ನು ಆಹ್ವಾನಿಸಲಾಗುವುದು' ಎಂದಿದ್ದಾರೆ.

                'ಮೆಕ್ಕಾ ಮಸೀದಿಯಲ್ಲಿ ಪ್ರಾರ್ಥನೆ ಬೋಧಿಸುವ ಪ್ರಮುಖರಾದ ಇಮಾಮ್ ಎ-ಹರಮ್‌ ಅವರನ್ನು ಒಳಗೊಂಡಂತೆ ಜಗತ್ತಿನ ಪ್ರಮುಖ ಧರ್ಮಗುರುಗಳು ಅಡಿಗಲ್ಲು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಇಂಡೊ ಇಸ್ಲಾಮಿಕ್ ಸಾಂಸ್ಕೃತಿಕ ಪ್ರತಿಷ್ಠಾನ (IICF) ಈ ಮಸೀದಿಯ ನಿರ್ಮಾಣ ಹೊಣೆ ಹೊತ್ತಿದೆ' ಎಂದು ಮಾಹಿತಿ ನೀಡಿದ್ದಾರೆ. ಮಹಾರಾಷ್ಟ್ರ ಮೂಲದವರಾದ ಶೇಖ್ ಅವರು ಬಿಜೆಪಿ ಮುಖಂಡ ಹಾಗೂ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷರೂ ಹೌದು.

               'ಮಸೀದಿ ನಿರ್ಮಾಣ ಕಾರ್ಯ ಮುಂದಿನ 5ರಿಂದ 6 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಅಯೋಧ್ಯೆಯಲ್ಲಿದ್ದ ಬಾಬ್ರಿ ಮಸೀದಿ ಬದಲಾಗಿ ಪ್ರವಾದಿ ಅವರ ಹೆಸರಿನಲ್ಲಿ ಮಸ್ಜಿದ್ ಮೊಹಮ್ಮದ್ ಬಿನ್ ಅಬ್ದುಲ್ಲಾ ನಿರ್ಮಿಸಲಾಗುವುದು. ಇದು ಅಯೋಧ್ಯೆಯಿಂದ 25 ಕಿ.ಮೀ. ದೂರದಲ್ಲಿರುವ ಧಾನಿಪುರದಲ್ಲಿ ನಿರ್ಮಾಣವಾಗಲಿದೆ. ಅಯೋಧ್ಯೆ ರಾಮ ಮಂದಿರ ವಿವಾದದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ಆದೇಶದಂತೆಯೇ ಮಸೀದಿ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಜಾಗ ನೀಡಿದೆ' ಎಂದು ತಿಳಿಸಿದ್ದಾರೆ.

                 'ಮಸೀದಿ ಪಕ್ಕದಲ್ಲಿರುವ ಜಾಗದಲ್ಲಿ ದಂತಚಿಕಿತ್ಸೆ, ಕಾನೂನು, ವಾಸ್ತುಶಾಸ್ತ್ರ ಹಾಗೂ ಅಂತರರಾಷ್ಟ್ರೀಯ ಸಂಬಂಧ ವಿಷಯಗಳನ್ನು ಬೋಧಿಸುವ ಕಾಲೇಜು ನಿರ್ಮಿಸಲಾಗುವುದು. ಜತೆಗೆ ಕ್ಯಾನ್ಸರ್‌ ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಗೆ ಸುಸಜ್ಜಿತ ಹಾಗೂ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಎರಡು ಆಸ್ಪತ್ರೆಗಳು ನಿರ್ಮಾಣಗೊಳ್ಳಲಿದೆ. ಮಸೀದಿಗೆ ಭೇಟಿ ನೀಡುವ ಎಲ್ಲಾ ಬಗೆಯ ಧರ್ಮಗಳಲ್ಲೂ ನಂಬಿಕೆ ಉಳ್ಳವರಿಗಾಗಿ ಶಾಕಾಹಾರಿ ಸಮುದಾಯ ಕೇಂದ್ರವೂ ನಿರ್ಮಾಣಗೊಳ್ಳಲಿದೆ' ಎಂದು ಶೇಖ್ ಹೇಳಿದರು.

                ಇಂಡೊ ಇಸ್ಲಾಮಿಕ್ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಜುಫರ್‌ ಅಹ್ಮದ್‌ ಫಾರುಕಿ ಅವರು ಪ್ರತಿಕ್ರಿಯಿಸಿ, '2024ರ ಆರಂಭದಲ್ಲಿ ಮಸೀದಿ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗುವುದು. ನಿರ್ಮಾಣ ಕಾರ್ಯ ಸಂಪೂರ್ಣಗೊಂಡ ನಂತರ ಜಾಗತಿಕ ಮಟ್ಟದ ಧಾರ್ಮಿಕ ನಾಯಕರನ್ನು ಆಹ್ವಾನಿಸಲಾಗುವುದು' ಎಂದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries