ಬೆಂಗಳೂರು: ತಾನು ಪ್ರಯಾಣಿಸಬೇಕಿದ್ದ ವಿಮಾನದ ಸೀಟಿನಲ್ಲಿ ಕುಶನ್ ಇಲ್ಲದ ಕುರಿತು ಪ್ರಯಾಣಿಕರೊಬ್ಬರು ದೂರಿದ್ದು, ಈ ಕುರಿತ ಟ್ವೀಟ್ ವ್ಯಾಪಕ ವೈರಲ್ ಆಗುತ್ತಿದೆ.
ಶನಿವಾರ ಮೆನ್ಸಾ ಬ್ರಾಂಡ್ಸ್‌ನ ಸಂಸ್ಥಾಪಕ ಅನಂತ್ ನಾರಾಯಣನ್ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದು, 2 ಗಂಟೆ ತಡವಾಗಿ ಬಂದ ಇಂಡಿಗೋ ವಿಮಾನ ಸಂಖ್ಯೆ 5047ರಲ್ಲಿ ಸೀಟಿನ ಕುಶನ್ ಇಲ್ಲ. ಸೇವೆಯು ನಿಜವಾಗಿಯೂ ಕ್ಷೀಣಿಸುತ್ತಿರುವಂತೆ ತೋರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ಕ್ಷಮೆ ಕೇಳಿದ ವಿಮಾನಯಾನ ಸಂಸ್ಥೆ
ಘಟನೆ ಕುರಿತು ಇಂಡಿಗೋ ವಿಮಾನಯಾನ ಸಂಸ್ಥೆ ಕ್ಷಮೆ ಕೋರಿದ್ದು, ನಮ್ಮ ಸಿಬ್ಬಂದಿಯೊಬ್ಬರು ನಿಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ನಾವು ನಂಬುತ್ತೇವೆ. ನಾವು ನೋಂದಾಯಿತ ಸಂಖ್ಯೆಗೆ ಕರೆ ಮಾಡಲು ಪ್ರಯತ್ನಿಸಿದ್ದೇವೆ ಆದರೆ ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎಂದು ಟ್ವೀಟ್ ಮಾಡಿದೆ. ಈ ಕುರಿತ ಹಿಂದಿನ ಟ್ವೀಟ್ ಅನ್ನು ಭಾನುವಾರ ಡಿಲೀಟ್ ಮಾಡಲಾಗಿದ್ದು, ಆದರೆ ಮೂಲ ಟ್ವೀಟ್‌ನ ಸ್ಕ್ರೀನ್‌ಶಾಟ್‌ಗಳು ವೈರಲ್ ಆಗುತ್ತಿವೆ.
ವಾರದಲ್ಲಿ 2ನೇ ಘಟನೆ
ವಿಮಾನದಲ್ಲಿ ಕುಷನ್ ಇಲ್ಲದ ಘಟನೆ ಇದು 2ನೇ ಘಟನೆಯಾಗಿದ್ದು, ಕಳೆದ ವಾರ ಪ್ರಯಾಣಿಕ ಸುಬ್ರತ್ ಪಟ್ನಾಯಕ್ ಇದೇ ರೀತಿಯ ಆರೋಪ ಮಾಡಿದ್ದರು. ಪುಣೆಯಿಂದ ನಾಗ್ಪುರಕ್ಕೆ ಭಾನುವಾರ ಸಂಚರಿಸಿದ ಇಂಡಿಗೋ ವಿಮಾನದಲ್ಲಿ ಒಂದು ಸೀಟ್‌ನಲ್ಲಿ ಕುಷನ್ ಇರಲೇ ಇಲ್ಲ. ಸೀಟ್ ಸಂಖ್ಯೆ 10ಎಯಲ್ಲಿ ಸೀಟ್‌ಗೆ ಕುಷನ್ ಇರಲಿಲ್ಲ. ಲಾಭವನ್ನು ಹೆಚ್ಚಿಸಲು ಅತ್ಯುತ್ತಮ ಪ್ರಯತ್ನ. ಎಂಥಾ ದುರವಸ್ಥೆ’ ಎಂದು ಬರೆದುಕೊಂಡಿದ್ದಾರೆ. ಅವರು ಟ್ವೀಟ್ ಮಾಡಿದ ತಕ್ಷಣವೇ ಅದು ವೈರಲ್ ಆಗಿತ್ತು.
ಇಂಡಿಗೋ ವಿರುದ್ಧ ಕಪಿಲ್ ಶರ್ಮಾ ಆಕ್ರೋಶ
ನವೆಂಬರ್ 29 ರಂದು, ಹಾಸ್ಯನಟ ಕಪಿಲ್ ಶರ್ಮಾ, ಚೆನ್ನೈ ವಿಮಾನ ನಿಲ್ದಾಣದಲ್ಲಿ ಸಾರ್ವಜನಿಕರನ್ನು 50 ನಿಮಿಷಗಳ ಕಾಲ ಬಸ್‌ನಲ್ಲಿ ಕಾಯುವಂತೆ ಮಾಡಿದ್ದಕ್ಕಾಗಿ ವಿಮಾನಯಾನ ಸಂಸ್ಥೆಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ವಿಮಾನದ ಪೈಲಟ್ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಹೀಗಾಗಿ ತಡವಾಗುತ್ತಿದೆ ಎಂದು ಸಂಸ್ಥೆ ಹೇಳಿಕೆ ನೀಡಿತ್ತು. ಆದರೆ ಇದನ್ನು ಕಪಿಲ್ ಶರ್ಮಾ 'ನಾಚಿಕೆಯಿಲ್ಲದ' ನಡವಳಿಕೆ ಎಂದು ಕಿಡಿಕಾರಿದ್ದರು. ಅಂತೆಯೇ ಅದೇ ದಿನ, ಬಾಲಿವುಡ್ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಅವರು ಕೂಡ ಟೇಕ್ ಆಫ್ ನಲ್ಲಿ ವಿಳಂಬ ಆರೋಪ ಮಾಡಿ ಇಂಡಿಗೋವನ್ನು ತರಾಟೆಗೆ ತೆಗೆದುಕೊಂಡಿದ್ದರು.