ನವದೆಹಲಿ /ತಿರುವನಂತಪುರ: ಎಲ್‌ಡಿಎಫ್ ಸರ್ಕಾರ ರಾಜ್ಯದಾದ್ಯಂತ ಹಮ್ಮಿಕೊಂಡಿರುವ 'ನವ ಕೇರಳ ಸದಸ್ಸ್'ನ (ಸಭೆ) ಉದ್ದೇಶವೇನು ಎಂದು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಪ್ರಶ್ನೆ ಮಾಡಿದ್ದಾರೆ.
ಇದರ ಬೆನ್ನಲ್ಲೇ ಗವರ್ನರ್‌ಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಜ್ಯಪಾಲ ಸಾಂವಿಧಾನಿಕ ಸ್ಥಾನಕ್ಕೆ ಅನುಗುಣವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ.
ಇದರೊಂದಿಗೆ ಕೇರಳದ ರಾಜ್ಯಪಾಲ ಮತ್ತು ಆಡಳಿತಾರೂಢ ಎಲ್‌ಡಿಎಫ್ ಸರ್ಕಾರದ ನಡುವೆ ಆರೋಪ-ಪ್ರತ್ಯಾರೋಪ ಮುಂದುವರಿದಿದೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯಪಾಲ, ಅರ್ಜಿಗಳನ್ನು ಸಂಗ್ರಹಿಸುವ ಉದ್ದೇಶ ಹೊಂದಿದ್ದರೆ ಸ್ಥಳೀಯವಾಗಿ ಸಂಗ್ರಹಿಸಬಹುದಿತ್ತು. ಜನರು ತಮ್ಮ ದೂರುಗಳನ್ನು ಜಿಲ್ಲಾಧಿಕಾರಿ ಅಥವಾ ಸ್ಥಳೀಯಾಡಳಿತ ಸಂಸ್ಥೆಗಳಿಗೆ ನೀಡಿ ಅದನ್ನು ರಾಜಧಾನಿಗೆ ಕಳುಹಿಸಬಹುದಿತ್ತು ಎಂದು ಹೇಳಿದ್ದಾರೆ.
ಸ್ಥಳದಲ್ಲೇ ಪರಿಹಾರ ನೀಡುವ ಉದ್ದೇಶವಾಗಿದ್ದರೆ ಇದೊಂದು ಉತ್ತಮ ಅಭಿಯಾನ ಆಗಿರುತ್ತಿತ್ತು. ಆದರೆ ಜನರ ಸಮಸ್ಯೆಗಳಿಗೆ ಯಾವುದೇ ಪರಿಹಾರ ಸಿಗುತ್ತಿಲ್ಲ. ಹಾಗಿದ್ದರೆ ಇದೇನು ಮೋಜಿನ ಯಾತ್ರೆಯೇ? ಯಾತ್ರೆಯ ಉದ್ದೇಶವೇನು? ಎಂದು ಕೇಳಿದರು.
ಇದಕ್ಕೆ ಸ್ಪಷ್ಟನೆ ಕೊಟ್ಟಿರುವ ಪಿಣರಾಯಿ ವಿಜಯನ್, ಜನರಿಗೆ ಸಮಸ್ಯೆ ವಿವರಿಸಲು ಆದ್ಯತೆ ನೀಡುತ್ತೇವೆ ಎಂದು ಹೇಳಿದ್ದಾರೆ. ಸಚಿವರು ಸ್ಥಳಕ್ಕೆ ಹೋದಾಗ ಜನರು ಮನವಿಗಳೊಂದಿಗೆ ಬರುತ್ತಾರೆ. ಇದನ್ನು ನಾವು ನಿರೀಕ್ಷೆ ಮಾಡಿದ್ದೆವು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುವ ಕಾರಣ ಅರ್ಜಿಗಳನ್ನು ಸಂಗ್ರಹಿಸುವುದು ಕಷ್ಟವಾಗಿದ್ದರಿಂದ ನಾವು ಅದಕ್ಕೆ ಪ್ರತ್ಯೇಕ ಕೌಂಟರ್‌ಗಳನ್ನು ತೆರೆದಿದ್ದೇವೆ ಎಂದು ಹೇಳಿದ್ದಾರೆ.
ಈ ಮೊದಲು ತಮ್ಮ ವಿರುದ್ಧ ಸ್ಟೂಡೆಂಟ್ ಫೆಡರೇಷನ್ ಆಫ್ ಇಂಡಿಯಾ (ಎಸ್‌ಎಫ್‌ಐ) ನಡೆಸಿದ್ದ ಪ್ರತಿಭಟನೆಯು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಂದ ರೂಪಿಸಲಾದ ಪಿತೂರಿ ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಆರೋಪಿಸಿದ್ದರು.
ಮತ್ತೊಂದೆಡೆ ರಾಜ್ಯದ ವಿಶ್ವವಿದ್ಯಾಲಯಗಳನ್ನು ಕೇಸರೀಕರಣಗೊಳಿಸಲು ರಾಜ್ಯಪಾಲರು ಯತ್ನಿಸುತ್ತಿದ್ದಾರೆ ಎಂದು ಆಡಳಿತಾರೂಢ ಸಿಪಿಎಂ ಆರೋಪಿಸಿದೆ. ಇದರ ವಿರುದ್ಧ ಸಿಪಿಎಂನ ವಿದ್ಯಾರ್ಥಿ ಸಂಘಟನೆಯಾದ ಎಸ್‌ಎಫ್‌ಐ ಪ್ರತಿಭಟನೆ ಹಮ್ಮಿಕೊಂಡಿದೆ.