ಕಾಸರಗೋಡು: ಕಳೆದ ಐದು ದಶಕಗಳಿಂದ ಸಿನಿಮಾ ಕ್ಷೇತ್ರದ ಒಳ ಹೊರಗನ್ನು ಅತೀ ಸನಿಹದಿಂದ ಬಲ್ಲ ಬಾನಾಸು ಅವರ ಅನುಭವಗಳನ್ನು ದಾಖಲಿಸಿ ಪುಸ್ತಕ ರೂಪದಲ್ಲಿ ಹೊರತರುವ ಮೂಲಕ ಮುಂದಿನ ತಲೆಮಾರಿಗೆ ಕನ್ನಡ ಚಿತ್ರರಂಗದ ಸಮಗ್ರ ಮಾಹಿತಿ ಒದಗಿಸಿಕೊಡುವ ಕೆಲಸ ನಡೆಯಬೇಕಾಗಿದೆ ಎಂದು ಶಾಸಕಿ ಉಮಾಶ್ರೀ ತಿಳಿಸಿದ್ದಾರೆ.
ಅವರು ಕಾಸರಗೋಡಿನ ಸಾಂಸ್ಕøತಿಕ-ಸಾಹಿತ್ಯಿಕ ಸಂಸ್ಥೆ ರಂಗ ಚಿನ್ನಾರಿ, ಅದರ ಸಹ ಘಟಕಗಳಾದ ನಾರಿ ಚಿನ್ನಾರಿ, ಸ್ವರ ಚಿನ್ನಾರಿ ಮತ್ತು ಕಾಸರಗೋಡಿನ ಕನ್ನಡ ಪರ ಸಂಘಟನೆಗಳ ಸಹಯೋಗದೊಂದಿಗೆ ಆಯೋಜಿಸಲಾದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ವಿಮರ್ಶಕ ಪ್ರಶಸ್ತಿಗೆ ಭಾಜನರಾದ ಬಾಡೂರು ನಾರಾಯಣ ಸುಬ್ರಹ್ಮಣ್ಯ (ಬಾನಾಸು) ಅವರಿಗೆ ಕರಂದಕ್ಕಾಡಿನ ಪದ್ಮಗಿರಿ ಕಲಾ ಕುಟೀರದಲ್ಲಿ ಆಯೋಜಿಸಲಾದ ಹುಟ್ಟೂರ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಸಮಾರಂಭ ಉದ್ಘಾಟಿಸಿ, ಆಸಿರ್ವಚನ ನೀಡಿ ಕಾಸರಗೋಡಿನ ಕನ್ನಡ ಪರ ಸಂಘಟನೆಗಳು ಕೈ ಜೋಡಿಸಿದಲ್ಲಿ ಗಡಿನಾಡ ಕನ್ನಡಿಗರ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಸುಬ್ರಹ್ಮಣ್ಯ ಬಾಡೂರು ಅವರ ರಾಷ್ಟ್ರ ಮಟ್ಟದ ಸಾಧನೆ ಕಾಸರಗೋಡಿನ ಸಮಸ್ತ ಕನ್ನಡಿಗರಿಗೆ ಕೀರ್ತಿ ತಂದುಕೊಟ್ಟಿರುವುದಾಗಿ ತಿಳಿಸಿದರು.
ಶಾಸಕ ಎನ್.ಎ.ನೆಲ್ಲಿಕುನ್ನು ಮಾತನಾಡಿ ಬಾನಾಸು ಕಾಸರಗೋಡಿಗೆ ಅಭಿಮಾನ ತರುವ ಕೆಲಸ ಮಾಡಿದ್ದಾರೆ. ಅವರು ಮತ್ತಷ್ಟು ಪ್ರಶಸ್ತಿ ಗಳಿಸಲಿ ಎಂದು ಶುಭ ಹಾರೈಸಿದರು. ರಾಷ್ಟ್ರ ಪ್ರಶಸ್ತಿ ವಿಜೇತ,ನಟ,ಶಿವಧ್ವಜ ಶೆಟ್ಟಿ ಮಾತನಾಡಿ, ಸಿನಿಮಾ ರಂಗ ಪ್ರವೇಶದ ಸಂದರ್ಭಗಳಲ್ಲಿ ಗುರುಸ್ಥಾನದಲ್ಲಿದ್ದು, ನನ್ನ ಬೆನ್ನು ತಟ್ಟಿ ಆಶೀರ್ವದಿಸಿ ತಿದ್ದಿದವರಲ್ಲಿ ಬಾನಾಸು ಮೊದಲಿಗರು. ಅವರಿಗೆ ಸಿನಿಮಾ ಕ್ಷೇತ್ರದ ಬಗ್ಗೆ ಇರುವ ಮಾಹಿತಿ ಅಪಾರವಾದುದು .ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ನಿರಂತರವಾಗಿ ಭಾಗವಹಿಸುತ್ತಿರುವ ಅವರು ಕನ್ನಡ ಚಿತ್ರರಂಗದ ನಡೆದಾಡುವ ವಿಶ್ವಕೋಶವಾಗಿದ್ದಾರೆ ಎಂದು ತಿಳಿಸಿದರು. ಮೈಸೂರಿನ ಖ್ಯಾತ ಪತ್ರಕರ್ತ ರವೀಂದ್ರ ಜೋಶಿ ಉಪಸ್ಥಿತರಿದ್ದರು.
ಕಾಸರಗೋಡಿನ ಕನ್ನಡ ಪರ ಸಂಸ್ಥೆ ಪದಾಧಿಕಾರಿಗಳು ಬಾನಾಸು ಅವರಿಗೆ ಶಾಲು,ಹಾರ ನೀಡಿ ಗೌರವಿಸಿದರು. ರಂಗ ಚಿನ್ನಾರಿ ಸಂಸ್ಥೆಯ ಪರವಾಗಿ ಪೇಟ,ಶಾಲು,ಫಲ, ಸನ್ಮಾನ ಪತ್ರ, ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಲಾಯಿತು.
ಸುಬ್ರಹ್ಮಣ್ಯ ಬಾಡೂರು ಸನ್ಮಾನ ಸ್ವೀಕರಿಸಿ ಮಾತನಾಡಿ, ಚಿತ್ರರಂಗದಲ್ಲಿ ತಾನು ನಡೆದು ಬಂದ ಹಾದಿಯ ಬಗ್ಗೆ ಮಾಹಿತಿ ನೀಡಿ, 'ಹುಟ್ಟೂರ ಗೌರವ'ದ ಬಗ್ಗೆ ಸಂತಸ ಹಂಚಿಕೊಮಡರು. ಕಾಯ್ಕ್ರಮದ ಅಂಗವಾಗಿ ಅಂತರರಾಷ್ಟ್ರೀಯ ಗಾಯಕ ರವೀಂದ್ರ ಪ್ರಭು ಅವರಿಂದ ಭಕ್ತಿ ಭಾವಗೀತೆಗಳ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ರಂಗ ಚಿನ್ನಾರಿ ನಿರ್ದೇಶಕ, ಕಾರ್ಯಕ್ರಮ ಸಂಯೋಜಕ, ಕಾಸರಗೋಡು ಚಿನ್ನಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು, ಕಿಶೋರ್ ಪೆರ್ಲ ಅವರು ಪ್ರಾರ್ಥನೆ ಹಾಡಿದರು.
ರಂಗ ಚಿನ್ನಾರಿ ನಿರ್ದೇಶಕ ಕೋಳಾರು ಸತೀಶ್ಚಂದ್ರ ಭಂಡಾರಿ ವಂದಿಸಿದರು.