ತಿರುವನಂತಪುರಂ: ಸಾರ್ವಕಾಲಿಕ ಹಾಸ್ಯವೊಂದು ಚಾಲ್ತಿಯಲ್ಲಿದೆ: ನೀಲ್ ಆರ್ಮ್ ಸ್ಟ್ರಾಂಗ್ ಚಂದ್ರನ ಮೇಲೆ ಕಾಲಿಟ್ಟಾಗ, ಅವನನ್ನು ಸ್ವಾಗತಿಸಲು ಅಲ್ಲಿ ಮಲಯಾಳಿಯೊಬ್ಬ ಇದ್ದ ಎಂದು.
ಅನಿವಾಸಿ ಮಲಯಾಳಿಗಳು ವಿಶ್ವದಾದ್ಯಂತ ಕಿರು ಕೇರಳಗಳನ್ನು ನಿರ್ಮಾಣ ಮಾಡುತ್ತಿದ್ದರೂ, ಅದರ ಪರಿಣಾಮ ತವರಿನ ಮೇಲೆ ಆಗುತ್ತಿದೆ.
ಕೇರಳ ಸರ್ಕಾರ ಬಿಡುಗಡೆ ಮಾಡಿರುವ ನೊಕ್ರಾ ರೂಟ್ಸ್ ವರದಿಯ ಪ್ರಕಾರ, ವಿಶ್ವದಲ್ಲಿರುವ 195 ದೇಶಗಳ ಪೈಕಿ 182 ದೇಶಗಳಲ್ಲಿ ಕೇರಳಿಗರು ಉದ್ಯೋಗ ಮಾಡುತ್ತಿದ್ದಾರೆ. ಅರ್ಥಾತ್, ವಿಶ್ವದ ಶೇ. 93ರಷ್ಟು ದೇಶಗಳಲ್ಲಿ ಕೇರಳಿಗರು ನೆಲೆಸಿದ್ದಾರೆ.
ಅಂದಾಜು 21 ಲಕ್ಷ ಮಲಯಾಳಿಗಳು ವಿಶ್ವದಾದ್ಯಂತ ವಲಸೆ ಹೋಗಿದ್ದಾರೆ ಎನ್ನುತ್ತದೆ 2018ರ ಕೇರಳ ವಲಸೆ ಸಮೀಕ್ಷೆ. ಕೆಲವರ ಪ್ರಕಾರ, ಈ ಅಂಕಿಸಂಖ್ಯೆಯು ವಾಸ್ತವದ ಅರ್ಧದಷ್ಟೂ ಇಲ್ಲ ಎನ್ನಲಾಗುತ್ತಿದೆ.
ಕೇರಳಿಗರ ವಲಸೆಯಿಂದ ಹಲವಾರು ಕೇರಳಗಳು ತಲೆಯೆತ್ತಿದ್ದು, ಅಲನ್ ರೇಗಿ ವರ್ಗೀಸ್ ಅಂತಹ ಕಿರು ಕೇರಳದಲ್ಲಿ ವಾಸಿಸುತ್ತಿರುವ ಮಲಯಾಳಿಯಾಗಿದ್ದಾರೆ.
33 ವರ್ಷದ ಈ ಡಿಜಿಟಲ್ ಮಾರುಕಟ್ಟೆ ವೃತ್ತಿಪರ ಎರಡು ವರ್ಷಗಳ ಹಿಂದೆ ಕೆನಡಾಗೆ ವಲಸೆ ಹೋಗಿದ್ದು, ವ್ಯಾಂಕೋವರ್ ನಲ್ಲಿ ನೆಲೆಸಿದ್ದಾರೆ.
ಅಲನ್ ಹಾಗೂ ಅವರ ಪತ್ನಿ ರೋಶ್ನಿ ಜಾಕೋಬ್ ತಮ್ಮ ಕೆನಡಾ ಕನಸುಗಳನ್ನು ಕಳೆಯುತ್ತಿದ್ದಾರೆ. ಅವರು ಆಗಾಗ ತಮ್ಮ ಮಲಯಾಳಿ ಗೆಳೆಯರೊಂದಿಗೆ ಆ ದೇಶದ ಅಂಚಿಗೆ ಕ್ಯಾಂಪ್ ಫೈರ್ ಶಿಬಿರಗಳಿಗೆ ತೆರಳುತ್ತಾರೆ.
ಓಣಂ ಸಂಭ್ರಮಾಚರಣೆ ಸೇರಿದಂತೆ ಹಲವಾರು ಸಾಮುದಾಯಿಕ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಲಭ್ಯವಿದ್ದು, ವಿಶ್ವದಾದ್ಯಂತ ಅವರ ಬಳಿ ಹಲವಾರು ದೇಶಗಳಲ್ಲಿ ಕಿರು ಕೇರಳಗಳಿರುವಂತೆಯೆ, ಕೆನಡಾಗೂ ಅವರು ಹೇಗೆ ಕೇರಳವನ್ನು ಕೊಂಡೊಯ್ದಿದ್ದಾರೆ ಎಂಬುದನ್ನು ತೋರಿಸುತ್ತವೆ.
"ವಲಸೆಯು ಮಲಯಾಳಿಗಳ ಜೀವನ ಶೈಲಿಯಾಗಿ ಬದಲಾಗಿದೆ" ಎಂದು indiatody.in ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ ನೋರ್ಕಾ ರೂಟ್ಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರಿಕೃಷ್ಣನ್ ನಂಬೂದಿರಿ. "ಇದರೊಂದಿಗೆ ಜಾಗತಿಕ ಕೇರಳ ಪರಿಕಲ್ಪನೆಯು ಬೆಳೆದಿದೆ" ಎಂದೂ ಅವರು ಹೇಳುತ್ತಾರೆ
ಮಲಯಾಳಿಗಳ ಜಾಗತಿಕ ಪಯಣವು ಕೇರಳವನ್ನು ಗರಗಸದಂತೆ ಎರಡೂ ಬದಿಯೂ ಕುಯ್ಯುತ್ತಿದೆ. ವಿದೇಶಗಳಿಂದ ರವಾನೆಯಾಗುವ ಹಣದಿಂದ ಕೇರಳದ ಆರ್ಥಿಕತೆಗೆ ಲಾಭವಾಗುತ್ತಿದ್ದರೆ, ವಿದೇಶಗಳಿಗೆ ವ್ಯಾಸಂಗಕ್ಕೆಂದು ವಿದ್ಯಾರ್ಥಿಗಳು ತೆರಳುವಾಗ ಕೂಡಾ ನಿಧಿಯ ಹೊರಹರಿಯುವಿಕೆ ಸಂಭವಿಸುತ್ತಿದೆ.
ಇನ್ನೊಂದು ದುಃಖಕರ ವಾಸ್ತವವೆಂದರೆ, ಕೇರಳದ ಲಕ್ಷಾಂತರ ಮನೆಗಳಿಗೆ ಬೀಗ ಮುದ್ರೆ ಬಿದ್ದಿದ್ದರೆ, ಕಾಲೇಜುಗಳ ಸೀಟುಗಳು ಖಾಲಿ ಉಳಿದಿವೆ.
ಆದರೆ, ಅವರು ದೇವರ ಸ್ವಂತ ನಾಡನ್ನು ಯಾಕೆ ತೊರೆಯುತ್ತಿದ್ದಾರೆ?
ಕೇರಳವು ಪ್ರಾಕೃತಿಕ ಸೌಂದರ್ಯದ ವರ ಪಡೆದಿದ್ದು, ಸಮಾಜೋ-ಅರ್ಥಿಕತೆಯ ಮಾನದಂಡದಲ್ಲೂ ಸಾಕಷ್ಟು ಉತ್ತಮವಾಗಿಯೇ ಇದೆ. ಹೀಗಿದ್ದೂ ಕೇರಳದಿಂದ ಜನರೇಕೆ ವಿದೇಶಗಳಿಗೆ ತೆರಳುತ್ತಿದ್ದಾರೆ?
"ದೊಡ್ಡ ಮೊತ್ತದ ವೇತನದೊಂದಿಗೆ ಉತ್ತಮ ಉದ್ಯೋಗಾವಕಾಶ, ಉತ್ತಮ ಔದ್ಯೋಗಿಕ ಜೀವನ ಸಮತೋಲನ, ಉತ್ತಮ ಮೂಲಸೌಕರ್ಯ, ಉತ್ತಮ ದರ್ಜೆಯ ಜೀವನ ಹಾಗೂ ಗರಿಷ್ಠ ಪ್ರಮಾಣದ ವೈಯಕ್ತಿಕ ಸ್ವಾತಂತ್ರ್ಯಕ್ಕಾಗಿ ನಾನು ಕೆನಡಾಗೆ ವರ್ಗಾವಣೆಯಾದೆ" ಎಂದು ಕೆನಡಾದಿಂದ ತಿಳಿಸಿದ್ದಾರೆ ಅಲನ್.
ಅನಿವಾಸಿ ಕೇರಳಿಗರ ಪಾಲಿಗೆ ಕೊಲ್ಲಿ ರಾಷ್ಟ್ರಗಳು ಉದ್ಯೋಗಾವಕಾಶಕ್ಕಾಗಿ ಆದ್ಯತೆಯ ದೇಶಗಳಾಗಿವೆ. ಉದಾಹರಣೆಗೆ ಯುಎಇಯಲ್ಲಿ ಸುಮಾರು ಎರಡು ಲಕ್ಷ ಮಂದಿ ಕೇರಳಿಗರು ಕೆಲಸ ಮಾಡುತ್ತಿದ್ದಾರೆ. ಇದಾದ ನಂತರದಲ್ಲಿ ಸೌದಿ ಅರೇಬಿಯಾ ಹಾಗೂ ಖತರ್ ಗಳಿವೆ.
"ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಕೇರಳಿಗರನ್ನು ನಿರ್ದಿಷ್ಟವಾಗಿ ಮಲಯಾಳಿಗಳು ಎಂದು ಗುರುತಿಸುವ ಬದಲು ಭಾರತೀಯರು ಎಂದು ಗುರುತಿಸಲಾಗುತ್ತದೆ. ಆದರೆ, ಕೊಲ್ಲಿ ರಾಷ್ಟ್ರಗಳಲ್ಲಿ ಮಲಯಾಳಿಗಳು ವಿಶಿಷ್ಟ ಗುರುತನ್ನು ಹೊಂದಿರುವುದರಿಂದ ಸ್ಥಳೀಯ ಅರಬರು ಅವರನ್ನು ಮಲಬಾರಿಗಳು ಎಂದು ಕರೆಯುತ್ತಾರೆ" ಎನ್ನುತ್ತಾರೆ ಅಲನ್.
ಕೊಲ್ಲಿ ರಾಷ್ಟ್ರಗಳಾಗಲಿ ಅಥವಾ ಪಾಶ್ಚಿಮಾತ್ಯ ದೇಶಗಳಾಗಲಿ, ಅಲ್ಲದೆ ಬಿಕ್ಕಟ್ಟಿರುವ ದೇಶಗಳೂ ಕೂಡಾ ಮಲಯಾಳಿಗಳಿಗೆ ಹೊರತಲ್ಲ. ಅವರು ಯುದ್ಧಪೀಡಿತ ದೇಶಗಳಾದ ಫೆಲೆಸ್ತೀನ್, ಸಿರಿಯಾ, ಉಕ್ರೇನ್ ಅಲ್ಲದೆ ಆಡಳಿತಾತ್ಮಕ ಸವಾಲು ಎದುರಿಸುತ್ತಿರುವ ಸೊಮಾಲಿಯಾ, ಸಿಯೆರಾ ಲಿಯೋನ್ ಹಾಗೂ ಅಫ್ಘಾನಿಸ್ತಾನಗಳಲ್ಲೂ ಉದ್ಯೋಗ ನಿರ್ವಹಿಸುತ್ತಿದ್ದಾರೆ.
ಮಲಯಾಳಿಗಳು ಬಹುತೇಕ ಎಲ್ಲ ದೇಶಗಳಲ್ಲೂ ವಾಸಿಸುತ್ತಿದ್ದಾರೆ. ಅವರು ತಮ್ಮ ಕೌಶಲವನ್ನು ಸರ್ವಾಧಿಕಾರ ನಾಯಕತ್ವ ಹೊಂದಿರುವ ತುರ್ಕ್ ಮೆನಿಸ್ತಾನ್, ಸೇನಾಡಳಿತವಿರುವ ಮ್ಯಾನ್ಮಾರ್ ಹಾಗೂ ಇರಾನ್ ನಂಥ ಪುರಾತನ ದೇಶ ಹಾಗೂ ದಕ್ಷಿಣ ಸುಡಾನ್ ನಂಥ ಹೊಚ್ಚ ಹೊಸ ದೇಶದಲ್ಲೂ ಉದ್ಯೋಗ ನಿರ್ವಹಿಸುತ್ತಿದ್ದಾರೆ. ಅವರು ರಷ್ಯಾದಂಥ ಬೃಹತ್ ಹಾಗೂ ವ್ಯಾಟಿಕನ್ ನಂಥ ಅತಿ ಸಣ್ಣ ದೇಶಗಳಲ್ಲೂ ಜೀವಿಸುತ್ತಿದ್ದಾರೆ.
ಕೇವಲ ಉದ್ಯೋಗಗಳಿಗೆ ಮಾತ್ರವಲ್ಲದೆ, ಶಿಕ್ಷಣಕ್ಕಾಗಿಯೂ ಮಲಯಾಳಿಗಳು ಕೇರಳವನ್ನು ತೊರೆಯುತ್ತಿದ್ದಾರೆ.
ಜಮೈಕಾ, ಕ್ಯುರುಕಾವೊ, ಬಾಂಗ್ಲಾದೇಶ ಹಾಗೂ ಐಲ್ ಆಫ್ ಮ್ಯಾನ್ ಸೇರಿದಂತೆ ವಿಶ್ವದ 54 ದೇಶಗಳಲ್ಲಿ ತಮ್ಮ ವ್ಯಾಸಂಗವನ್ನು ಮುಂದುವರಿಸುತ್ತಿದ್ದಾರೆ ಕೇರಳಿಗರು.
ಆದರೆ, ಮಲಯಾಳಿಗಳು ಸಂಪೂರ್ಣವಾಗಿ ಇಲ್ಲದ ಎರಡು ದೇಶಗಳು ಪಾಕಿಸ್ತಾನ ಹಾಗೂ ಉತ್ತರ ಕೊರಿಯಾ ಆಗಿವೆ.
ಈ ಅಂಕಿಸಂಖ್ಯೆಯು ಕೇರಳ ಸರ್ಕಾರವು ನೋರ್ಕಾ ಇಲಾಖೆಯ ಮೂಲಕ ವಿತರಿಸಿರುವ ಪ್ರವಾಸಿ ಗುರುತಿನ ಚೀಟಿಗಳ ಮಾಹಿತಿಯನ್ನು ಆಧರಿಸಿದೆ. ಈ ದತ್ತಾಂಶವು 2018ರಿಂದ 2022ಕ್ಕೆ ಸೇರಿದೆ. ಈ ದತ್ತಾಂಶವು, ನೋರ್ಕಾದಲ್ಲಿ ನೋಂದಾಯಿಸಿಕೊಳ್ಳದ ಹಾಗೂ ವಿದ್ಯಾರ್ಥಿ ವೀಸಾಗಳೊಂದಿಗೆ ತೆರಳಿ ಉದ್ಯೋಗ ಪರವಾನಗಿ ಪಡೆದಿರುವ, ಖಾಯಂ ನಿವಾಸಿ ಅಥವಾ ನಾಗರಿಕತ್ವ ಪಡೆದಿರುವವರ ವಿವರವನ್ನು ಒಳಗೊಂಡಿಲ್ಲ.
ಉದಾಹರಣೆಗೆ ಅಲನ್ ಹಾಗೂ ರೋಶ್ನಿ ಎರಡು ವರ್ಷಗಳ ಹಿಂದೆ ಕೆನಡಾಗೆ ವಲಸೆ ಹೋಗಿದ್ದರೂ, ಅವರಿಬ್ಬರೂ ನೊರ್ಕಾದಲ್ಲಿ ನೋಂದಾಯಿಸಿಕೊಂಡಿಲ್ಲ.
ಹೀಗಾಗಿಯೇ, ಅಧಿಕೃತ ಅಂಕಿ ಅಂಶಗಳಿಗಿಂತ ಜಗತ್ತಿನಾದ್ಯಂತ ಉದ್ಯೋಗ ನಿರ್ವಹಿಸುತ್ತಿರುವ ಮಲಯಾಳಿಗಳ ಸಂಖ್ಯೆ ಹಲವು ಪಟ್ಟು ಹೆಚ್ಚಿದೆ ಎನ್ನುತ್ತಾರೆ ತಜ್ಞರು.
ಕೇರಳ ವಲಸಿಗರ ಎರಡು ಧಾರೆಗಳು
ಇಷ್ಟು ದೊಡ್ಡ ಮಟ್ಟದ ವಲಸೆ ನಡೆಯುತ್ತಿರುವಾಗಲೇ, ಉದ್ಯೋಗವನ್ನು ಅರಸಿ ಕೇರಳವನ್ನು ತೊರೆಯುತ್ತಿರುವ ಕೇರಳಿಗರ ಮಾರ್ಗವು ಎರಡು ಮುಖ್ಯ ಧಾರೆಗಳಲ್ಲಿರುವುದು ಗಮನಾರ್ಹವಾಗಿದೆ.
ಮೊದಲ ಮಾರ್ಗವನ್ನು ಆಯ್ದುಕೊಂಡು ಗಲ್ಫ್ ಕೋಆಪರೇಷನ್ ಕೌನ್ಸಿಲ್ ದೇಶಗಳಾದ ಯುಎಇ, ಸೌದಿ ಅರೇಬಿಯಾ, ಖತರ್, ಕುವೈತ್, ಒಮಾನ್ ಹಾಗೂ ಬಹ್ರೈನ್ ಗೆ ತೆರಳುವ ಬಹುತೇಕರು ಕೌಶಲ ರಹಿತ ಕಾರ್ಮಿಕರಾಗಿದ್ದಾರೆ.
ಅವರೆಲ್ಲ ಕೌಶಲ ರಹಿತ ಕಾರ್ಮಿಕರಾಗಿದ್ದರೂ, ಕೇರಳ ಆರ್ಥಿಕತೆಯ ಬೆನ್ನೆಲುಬಾಗಿದ್ದಾರೆ ಹಾಗೂ ಹಲವಾರು ವರ್ಷಗಳ ಕಾಲ ವಿದೇಶಗಳಲ್ಲಿ ಕೆಲಸ ನಿರ್ವಹಿಸಿದ ನಂತರ ಮತ್ತು ಹಲವಾರು ವರ್ಷಗಳ ಕಾಲ ತಮ್ಮ ತಾಯ್ನಾಡಿಗೆ ಹಣವನ್ನು ರವಾನೆ ಮಾಡಿದ ನಂತರ, ಅವರೆಲ್ಲ ಮತ್ತೆ ತಮ್ಮ ತವರಿಗೆ ಮರಳುತ್ತಾರೆ. 1970ರಲ್ಲಿ ಕೊಲ್ಲಿ ರಾಷ್ಟ್ರಗಳಲ್ಲಿ ತೈಲ ನಿಕ್ಷೇಪಗಳು ಪತ್ತೆಯಾದ ನಂತರ ಈ ಪ್ರವೃತ್ತಿಯು ಏರುಗತಿಯಲ್ಲಿದೆ.
ಉತ್ತಮ ಕೌಶಲ ಹಾಗೂ ಶಿಕ್ಷಣ ಹೊಂದಿರುವ ಮತ್ತೊಂದು ಧಾರೆಯ ಕೇರಳಿಗರು ಪಾಶ್ಚಿಮಾತ್ಯ ಅಭಿವೃದ್ಧಿಗೊಂಡ ದೇಶಗಳತ್ತ ವಲಸೆ ತೆರಳುತ್ತಾರೆ.
ಮಲಯಾಳಿಗಳು ಅಮೆರಿಕಾ, ಕೆನಡಾ, ಆಸ್ಟ್ರೇಲಿಯಾ, ನ್ಯೂಝಿಲ್ಯಾಂಡ್ ಹಾಗೂ ಇನ್ನಿತರ ಯೂರೋಪಿಯನ್ ದೇಶಗಳಿಗೆ ವಲಸೆ ಹೋಗುತ್ತಾರೆ. ಈ ಗುಂಪಿನಲ್ಲಿ ಹಲವಾರು ಮಂದಿ ಖಾಯಂ ನಿವಾಸ ಅಥವಾ ನಾಗರಿಕತ್ವವನ್ನು ಪಡೆದಿದ್ದು, ಅವರು ಮತ್ತೆ ಕೇರಳಕ್ಕೆ ಮರಳುವ ಸಾಧ್ಯತೆ ತೀರಾ ಕಡಿಮೆ.
"ಪ್ರಾರಂಭದಲ್ಲಿ ಕೌಶಲ ರಹಿತ ಕಾರ್ಮಿಕರು ವಿದೇಶಗಳಿಗೆ ತೆರಳುತ್ತಿದ್ದರು. ಆದರೀಗ ಕುಶಲ ಕಾರ್ಮಿಕರು, ಅರೆ ಕುಶಲ ಕಾರ್ಮಿಕರು ಹಾಗೂ ಸೂಕ್ಷ್ಮ ಕುಶಲ ಕಾರ್ಮಿಕರು ವಲಸೆ ಹೋಗುತ್ತಿದ್ದಾರೆ" ಎಂದು ನೊರ್ಕಾ ರೂಟ್ಸ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರಿಕೃಷ್ಣನ್ ನಂಬೂದಿರಿ ಹೇಳುತ್ತಾರೆ. ಇದು ನಿಜಕ್ಕೂ ಕೇರಳದಿಂದ ಆಗುತ್ತಿರುವ ಪ್ರತಿಭಾ ಪಲಾಯನದತ್ತ ಬೊಟ್ಟು ಮಾಡುತ್ತದೆ.
ಕೇರಳದಿಂದ ನಿಧಿಯ ಹೊರಹರಿಯುವಿಕೆ
ವಲಸೆಯ ಕತೆಗೆ ಎರಡು ಬದಿ ಇದೆ. ವಲಸೆಯಿಂದ ರವಾನೆಗೆ ಸಹಾಯವಾಗುತ್ತಿದ್ದರೆ, ನಿಧಿಯ ಹೊರಹರಿಯುವಿಕೆಗೂ ಕಾರಣವಾಗುತ್ತಿದೆ. ಇದರೊಂದಿಗೆ, ಕೇರಳ ಗ್ರಾಮಗಳು ಹಾಗೂ ಕಾಲೇಜುಗಳ ತರಗತಿ ಕೋಣೆಗಳು ಖಾಲಿಯಾಗುತ್ತಿವೆ.
ಕೆಎಂಎಸ್ 2018 ಪ್ರಕಾರ, ವಿದೇಶಗಳಿಗೆ ತೆರಳಿರುವ ಕೇರಳಿಗರಿಂದ ಕೇರಳಕ್ಕೆ ರವಾನೆ ಆಗಿರುವ ಒಟ್ಟು ಮೊತ್ತ ರೂ. 85,092 ಕೋಟಿ ಆಗಿದೆ. ಇದರೊಂದಿಗೆ ಕೇರಳದ ಆರ್ಥಿಕತೆಯು ವಿದೇಶಗಳಿಂದ ರವಾನೆಯಾಗುತ್ತಿರುವ ಹಣವನ್ನು ಅವಲಂಬಿಸಿದೆ ಎಂಬ ದೂಷಣೆಗೂ ದೀರ್ಘಕಾಲದಿಂದ ಒಳಗಾಗಿದೆ.
ಆದರೆ, ಅದೇ ರೀತಿ ನಿಧಿಯ ಹೊರಹರಿಯುವಿಕೆಯೂ ಆಗುತ್ತಿದೆ.
ಐಐಎಂ ಕೋಯಿಕ್ಕೋಡ್ ವರದಿಯ ಪ್ರಕಾರ, ಮಲಯಾಳಿಗಳು ವಿದೇಶಕ್ಕೆ ತೆರಳಲು ಕುಟುಂಬದ ಉಳಿತಾಯ ಮೊತ್ತ, ಬ್ಯಾಂಕ್ ಸಾಲಗಳು, ಗೆಳೆಯರಿಂದ ಸಾಲಗಳ ಮೊರೆ ಹೋಗುತ್ತಾರೆ. ಈ ಸಾಲದ ಮೊತ್ತವು ರೂ. 2 ಲಕ್ಷದಿಂದ ರೂ. 10 ಲಕ್ಷದವರೆಗೂ ಇರುತ್ತದೆ.
ಯಾರಾದರೂ ಅಭಿವೃದ್ಧಿ ಹೊಂದಿದ ದೇಶಗಳಿಗೆ ವಲಸೆ ಹೋದರೆ, ಅಂಥವರು ತಮ್ಮ ಸ್ವತ್ತುಗಳನ್ನು ಅಡಮಾನವಿಟ್ಟು ಸಾಲ ಪಡೆಯುವುದರಿಂದ, ಹಣವು ರಾಜ್ಯದಿಂದ ಹೊರಗೆ ಹರಿಯುತ್ತದೆ.
ಇದಾದ ನಂತರ ವಿದ್ಯಾರ್ಥಿಗಳೂ ಶಿಕ್ಷಣ ಸಾಲ ಪಡೆದು ವಿದೇಶಗಳಿಗೆ ತೆರಳುವುದರಿಂದ, ಅದರಿಂದಾಗಿಯೂ ನಿಧಿಯ ಹೊರಹರಿಯುವಿಕೆಯಾಗುತ್ತಿದೆ.
ಕೇರಳದ ಬೀಗ ಬಿದ್ದ ಮನೆಗಳು, ಖಾಲಿ ಕಾಲೇಜುಗಳು
ಈ ವಲಸೆ ಪ್ರಮಾಣದಿಂದ ಆಗಿರುವ ಗಮನಾರ್ಹ ಪರಿಣಾಮವೆಂದರೆ, ಕೇರಳದ ನಾಲ್ಕು ಪ್ರಮುಖ ವಿಶ್ವವಿದ್ಯಾಲಯಗಳಲ್ಲಿನ ಕಲೆ ಮತ್ತು ವಿಜ್ಞಾನ ಕಾಲೇಜುಗಳಲ್ಲಿನ ಸೀಟುಗಳು ಖಾಲಿ ಉಳಿಯುತ್ತಿರುವುದು. ಈ ಪರಿಸ್ಥಿತಿ ಎಷ್ಟು ಆತಂಕಕಾರಿಯಾಗಿದೆಯೆಂದರೆ, ಕೆಲವು ಸಂಸ್ಥೆಗಳು ಉಳಿಯಲೇ ಹೋರಾಡುತ್ತಿವೆ.
82,230 ಬೃಹತ್ ಸಂಖ್ಯೆಯ ಸೀಟುಗಳು ಖಾಲಿ ಉಳಿದಿವೆ ಎಂಬ ವರದಿಗಳಿದ್ದು, ಕೇರಳದಲ್ಲಿ ಉನ್ನತ ಶಿಕ್ಷಣವನ್ನು ಮುಂದುವರಿಸುವುದು ಎಷ್ಟು ವಿರಳವಾಗುತ್ತಿದೆ ಎಂಬುದನ್ನು ಸೂಚಿಸುತ್ತಿದೆ.
ಈ ಹಿಂದಿನ ಪ್ರವೃತ್ತಿಗೆ ಹೋಲಿಸಿದರೆ, ಈ ಹಿಂದೆಲ್ಲ ವಿದ್ಯಾರ್ಥಿಗಳು ತಮ್ಮ ಪದವಿ ಪೂರೈಸಿದ ನಂತರ ವಿದೇಶಗಳಲ್ಲಿ ಡಿಪ್ಲೊಮಾ ಹಾಗೂ ಸ್ನಾತಕೋತ್ತರ ಪದವಿಯನ್ನು ಮುಂದುವರಿಸಲು ಆಸಕ್ತಿ ತೋರುತ್ತಿದ್ದರು. ಆದರೀಗ, ಕೇವಲ ತಮ್ಮ ಪ್ರೌಢ ಶಿಕ್ಷಣ ಪೂರ್ಣಗೊಂಡ ನಂತರವೇ ವಿದ್ಯಾರ್ಥಿಗಳು ವಿದೇಶಗಳಲ್ಲಿ ವ್ಯಾಸಂಗ ಮಾಡಲು ಉತ್ಸುಕತೆ ಪ್ರದರ್ಶಿಸುತ್ತಿದ್ದಾರೆ.
ವಿದೇಶಗಳಲ್ಲಿ ವ್ಯಾಸಂಗ ಮಾಡಲು ಬಯಸುವ ಯೋಜನೆ ಹೊಂದಿರುವ ವಿದ್ಯಾರ್ಥಿಗಳಿಗೆ ನೆರವು ಒದಗಿಸುತ್ತಿರುವ ಖಾಸಗಿ ಸಂಸ್ಥೆಯೊಂದು 2023 ಒಂದರಲ್ಲೇ 11,636 ವೀಸಾಗಳನ್ನು ದೊರಕಿಸಿಕೊಟ್ಟಿದೆ. ಇದು ಕೇವಲ ಒಂದು ಸಂಸ್ಥೆಯ ವಿಚಾರವಾಗಿದೆ.
ಇದು ಕೇವಲ ಖಾಲಿಗೊಂಡ ಕಾಲೇಜುಗಳ ಕತೆಯಲ್ಲ; ಖಾಲಿಯಾಗಿರುವ ಮನೆಗಳ ಕತೆ ಕೂಡಾ. ಕೇರಳದಲ್ಲಿ ಗ್ರಾಮದ ನಂತರ ಗ್ರಾಮದಲ್ಲಿ ಮನೆಗಳಿಗೆ ಬೀಗ ಮುದ್ರೆ ಬೀಳತೊಡಗಿದೆ.
ಕೇರಳದಲ್ಲಿನ 12 ಲಕ್ಷ ಬೀಗ ಹಾಕಿರುವ ಮನೆಗಳ ಪೈಕಿ ಶೇ. 60ರಷ್ಟು ಮನೆಗಳು ಅನಿವಾಸಿ ಕೇರಳಿಗರಿಗೆ ಸೇರಿವೆ. 2011ರ ಜನಗಣತಿಯ ಪ್ರಕಾರ, ಅವರೆಲ್ಲ ವಿದೇಶಗಳಲ್ಲಿ ನೆಲೆಸಿದ್ದಾರೆ. ಜನಗಣತಿ ನಡೆದು 12 ವರ್ಷಗಳೇ ಆಗಿರುವುದರಿಂದ ಈ ಪರಿಸ್ಥಿತಿಯು ಮತ್ತಷ್ಟು ಬಿಗಡಾಯಿಸಿರುವ ಸಾಧ್ಯತೆ ಇದೆ.
ಕೇರಳದಂತೆ ಪಂಜಾಬ್ ರಾಜ್ಯದಲ್ಲೂ ಹಾಳು ಬಿದ್ದ ಗ್ರಾಮಗಳು ಹಾಗೂ ಕೇವಲ ಹಿರಿಯ ನಾಗರಿಕರನ್ನೇ ಹೊಂದಿರುವ ಗ್ರಾಮಗಳಿವೆ. ಈ ಗ್ರಾಮಗಳಲ್ಲಿ ವಿದೇಶಗಳಿಗೆ ವಲಸೆ ಹೋಗುವ ಹುಚ್ಚು ಯುವಕರಲ್ಲಿ ಮನೆ ಮಾಡಿದೆ. ಕೇರಳ, ಪಂಜಾಬ್, ಗುಜರಾತ್ ರಾಜ್ಯಗಳಲ್ಲದೆ, ಎರಡು ತೆಲುಗು ರಾಜ್ಯಗಳಾದ ಆಂಧ್ರ ಪ್ರದೇಶ ಹಾಗೂ ತೆಲಂಗಾಣಗಳಿಂದಲೂ ಭಾರಿ ಪ್ರಮಾಣದ ವಲಸೆ ನಡೆಯುತ್ತಿದೆ.
ಕೊಲ್ಲಿ ರಾಷ್ಟ್ರಗಳ ಸರ್ಕಾರಗಳು ವಲಸಿಗ ಮಲಯಾಳಿಗಳಿಗೆ ನಾಗರಿಕತ್ವ ನೀಡಿದಿರುವ ನೀತಿಯನ್ನು ಅಳವಡಿಸಿಕೊಂಡಿರುವುದರಿಂದ ಅವರೆಲ್ಲ ತವರಿಗೆ ಮರಳಿಯೇ ತೀರುತ್ತಾರೆ. ಆದರೆ, ಕೇರಳದಿಂದ ಪಾಶ್ಚಿಮಾತ್ಯ ದೇಶಗಳಿಗೆ ವಲಸೆ ಹೋದವರು ಮತ್ತೆ ಮರಳಿ ಬರುವ ಸಾಧ್ಯತೆಯೇ ಇಲ್ಲವಾಗಿದೆ.
"ಅಭಿವೃದ್ಧಿ ಹೊಂದಿದ ದೇಶಗಳಲ್ಲಿರುವ ವಲಸಿಗ ಮಲಯಾಳಿಗಳ ಬಳಿ ಮತ್ತೆ ಕೇರಳಕ್ಕೆ ಮರಳುವ ಯಾವುದೇ ಯೋಜನೆ ಇಲ್ಲ. ಬಹುಶಃ ಕೆಲವರು ತಮ್ಮ ನಿವೃತ್ತಿ ಜೀವನವನ್ನು ಕೇರಳದಲ್ಲಿ ಕಳೆಯಲು ಬಯಸಬಹುದೇ ಹೊರತು, ಹಲವಾರು ಮಂದಿಗೆ ಇದು ಒಂದು ಕಡೆಗೆ ಸಾಗುವ ಟಿಕೆಟ್" ಎನ್ನುತ್ತಾರೆ ಅಲನ್.
ಮಲಯಾಳಿಗಳ ವಲಸೆಯು ಭಾರಿ ಪ್ರಮಾಣದಲ್ಲಿ ಮುಂದುವರಿದಿದ್ದರೂ, ಹಲವಾರು ಪಾಶ‍್ಚಿಮಾತ್ಯ ದೇಶಗಳು ಆರ್ಥಿಕ ಹಾಗೂ ರಾಷ್ಟ್ರೀಯ ಭದ್ರತೆಯ ಕಾರಣಕ್ಕೆ ವೀಸಾ ನಿಯಮಾವಳಿಗಳನ್ನು ಬಿಗಿಗೊಳಿಸತೊಡಗಿವೆ. ವೀಸಾ ನೀತಿಗಳಲ್ಲಿ ಆಗುತ್ತಿರುವ ತಿದ್ದುಪಡಿಯಿಂದ ಕೌಶಲ ರಹಿತ ಮಲಯಾಳಿಗಳಿಗೆ ಹೆಚ್ಚು ತೊಂದರೆಯಾಗುವ ಸಾಧ್ಯತೆ ಕಾಣುತ್ತಿದೆ.
ಆದರೆ, ಇಲ್ಲಿಯವರೆಗೆ ಬ್ಯಾಂಕ್ ಗಳಲ್ಲಿ ಕೋಟ್ಯಂತರ ರೂಪಾಯಿ ಹಣ ಜಮೆಯಾಗುತ್ತಿದ್ದರೂ, ಬೀಗ ಬಿದ್ದ ಮನೆಗಳು ಹಾಗೂ ಖಾಲಿ ಹೊಡೆಯುತ್ತಿರುವ ಕಾಲೇಜುಗಳ ಸಂಖ್ಯೆಯೂ ಬೆಳೆಯುತ್ತಲೇ ಹೋಗಲಿದೆ.