ನವದೆಹಲಿ: ಜುಲೈ- ಸೆಪ್ಟೆಂಬರ್ ಅವಧಿಯ ಎರಡನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ನಿರೀಕ್ಷೆಗೂ ಮೀರಿ ಶೇ. 7.6 ರಷ್ಟು ವೃದ್ಧಿಯಾಗಿದೆ.
ಈ ಅವಧಿಯಲ್ಲಿ ಹಲವು ಸಂಸ್ಥೆಗಳು ಜಿಡಿಪಿ ಶೇ. ಶೇ. 6.5, 6.8 ರಷ್ಟು ಪ್ರಗತಿ ಸಾಧಿಸಬಹುದು ಎಂದು ಅಂದಾಜು ಮಾಡಿತ್ತು. ಆದರೆ ಈ ನಿರೀಕ್ಷೆಗೂ ಮೀರಿ ಜಿಡಿಪಿ 7.6% ರಷ್ಟು ಪ್ರಗತಿ ಸಾಧಿಸಿದೆ.
ಎರಡನೇ ತ್ರೈಮಾಸಿಕದಲ್ಲಿ ಈ ಸಾಧನೆ ಮಾಡುವ ಮೂಲಕ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಆರ್ಥಿಕತೆಯಲ್ಲಿ (World Fastest Economic Growth) ಮೊದಲ ಸ್ಥಾನದಲ್ಲೇ ಭಾರತ ಮುಂದುವರಿದಿದೆ.
ಹೆಚ್ಚಿನ ಹಣದುಬ್ಬರ ಹಾಗೂ ಜಾಗತಿಕ ಆರ್ಥಿಕ ಸಮಸ್ಯೆಗಳ ನಡುವೆ ಸತತ ಎರಡು ತ್ರೈಮಾಸಿಗಳಲ್ಲಿ ಭಾರತದ ಜೆಡಿಪಿ ಶೇ. 7ಕ್ಕೂ ಅಧಿಕ ಪ್ರಗತಿ ಸಾಧಿಸುವ ಮೂಲಕ ಭಾರತದ ಆರ್ಥಿಕ ಬೆಳವಣಿಗೆ ತನ್ನ ಲಯಕ್ಕೆ ಮರಳುವುದು ಖಚಿತವಾಗಿದೆ.
ಈ ಮಧ್ಯೆ ಕೈಗಾರಿಕೆ ಮತ್ತು ಸೇವಾ ವಲಯಗಳು ತಮ್ಮ ವೇಗವನ್ನು ಕಾಯ್ದುಕೊಂಡಿದ್ದು, ಕೃಷಿ ಕ್ಷೇತ್ರದ ಉತ್ಪಾದನೆಯಲ್ಲಿನ ಕುಸಿತವನ್ನು ಸರಿದೂಗಿಸಿತು. ಗಮನಾರ್ಹವಾದ ಬದಲಾವಣೆಯಲ್ಲಿ, ಗಣಿಗಾರಿಕೆ ಮತ್ತು ಉತ್ಪಾದನೆ ಎರಡೂ ಕ್ಷೇತ್ರಗಳಲ್ಲಿ ಕ್ರಮವಾಗಿ ಶೇ. 10 ಮತ್ತು ಶೇ. 13.9 ರಷ್ಟು ಎರಡಂಕಿಯ ಬೆಳವಣಿಗೆಯನ್ನು ದಾಖಲಿಸಿದೆ.
ಅಂತೆಯೇ, ವಿದ್ಯುಚ್ಛಕ್ತಿ, ಉಪಯುಕ್ತತೆ ಸೇವೆಗಳು ಮತ್ತು ನಿರ್ಮಾಣ ಕ್ಷೇತ್ರದಲ್ಲಿ ಕ್ರಮವಾಗಿ ಶೇ. 10.1 ಮತ್ತು ಶೇ. 13.3 ರಷ್ಟು ದೃಢವಾದ ಬೆಳವಣಿಗೆ ಸಾಧಿಸಿದೆ. ಆದಾಗ್ಯೂ, ವ್ಯಾಪಾರ, ಹೋಟೆಲ್‌ಗಳು, ಸಾರಿಗೆ, ಹಣಕಾಸು, ರಿಯಲ್ ಎಸ್ಟೇಟ್ ಮತ್ತು ಸಾರ್ವಜನಿಕ ಆಡಳಿತ ಮತ್ತಿತರ ಸಂಬಂಧಿತ ಕ್ಷೇತ್ರಗಳಲ್ಲಿ ಒಂದೇ ಅಂಕಿಯ ಬೆಳವಣಿಗೆಯೊಂದಿಗೆ ಕೊನೆಗೊಂಡಿದೆ.