ನವದೆಹಲಿ: ವ್ಯಾಪಾರಿ ಹಡಗುಗಳ ಮೇಲೆ ದಾಳಿ ನಡೆಸಿದವರನ್ನು ಸಮುದ್ರದ ಆಳದಿಂದಲೇ ಬೇಟೆಯಾಡುತ್ತೇವೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಅರಬ್ಬಿ ಸಮುದ್ರದಲ್ಲಿ ಎಂ.ವಿ. ಕೆಮ್ ಪ್ಲುಟೊ ಹೆಸರಿನ ತೈಲ ಸಾಗಣೆಯ ವಾಣಿಜ್ಯ ಹಡಗು ಮತ್ತು ದಕ್ಷಿಣ ಕೆಂಪು ಸಮುದ್ರದಲ್ಲಿ ಎಂ.ವಿ. ಸಾಯಿಬಾಬಾ ಹಡಗಿನ ಜತೆಗೆ ನಾರ್ವೆ ಧ್ವಜ ಹೊಂದಿದ್ದ ಎಂ/ವಿ ಬ್ಲಾಮನೆನ್ ಹೆಸರಿನ ಹಡಗಿನ ಮೇಲೆ ನಡೆದಿರುವ ದಾಳಿಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ರಾಜನಾಥ ತಿಳಿಸಿದ್ದಾರೆ.
ದಾಳಿ ಹಿಂದೆ ಯಾರೇ ಭಾಗಿಯಾಗಿದ್ದರೂ ಅವರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಂಗ್ ಹೇಳಿದ್ದಾರೆ.
ಗುಜರಾತ್‌ನ ವೆರಾವಲ್ ಕರಾವಳಿಯಿಂದ 200 ನಾಟಿಕಲ್ ಮೈಲಿ ದೂರದಲ್ಲಿ ಕಚ್ಚಾ ತೈಲ ಸಾಗಿಸುತ್ತಿದ್ದ ಹಡಗಿನಲ್ಲಿ ಶನಿವಾರ ಸ್ಫೋಟ ಸಂಭವಿಸಿತ್ತು. ಡ್ರೋನ್ ದಾಳಿಯೇ ಈ ಸ್ಫೋಟಕ್ಕೆ ಕಾರಣ ಎಂದು ಶಂಕಿಸಲಾಗಿತ್ತು.
ಭಾರತೀಯ ಕರಾವಳಿ ಕಾವಲು ಪಡೆಯ ನೌಕೆ ಐಸಿಜಿಎಸ್ ವಿಕ್ರಮ್‌ನ ಬೆಂಗಾವಲಿನಲ್ಲಿ ಎಂವಿ ಚೆಮ್ ಪ್ಲುಟೊ ಹಡಗನ್ನು ಮಂಗಳವಾರ ಮುಂಬೈಗೆ ತರಲಾಗಿದೆ. ಕರಾವಳಿ ಕಾವಲು ಪಡೆಯ ಕಾರ್ಯನಿರ್ವಹಣಾ ಕೇಂದ್ರವು ಈ ಕುರಿತು ನಿಗಾವಹಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಡಗಿನಲ್ಲಿರುವ ಸರಕುಗಳನ್ನು ಮತ್ತೊಂದು ಹಡಗಿಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಭಾರತೀಯ ನೌಕಾಪಡೆ, ಗುಪ್ತಚರ ಸಂಸ್ಥೆಗಳು ಮತ್ತು ಇತರ ಅಧಿಕಾರಿಗಳು ಹಡಗಿನ ಮೇಲೆ ನಡೆದಿರುವ ದಾಳಿಯ ಬಗ್ಗೆ ಜಂಟಿ ತನಿಖೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಡ್ರೋನ್ ದಾಳಿಯನ್ನು ಎಲ್ಲಿಂದ ಮಾಡಲಾಗಿದೆ ಎಂಬುದನ್ನೂ ಸೇರಿ ಸಂಪೂರ್ಣ ಘಟನೆ ಕುರಿತು ನೌಕಾಪಡೆ ತನಿಖೆ ನಡೆಸುತ್ತಿದ್ದು, ದಾಳಿ ನಡೆದ ಸ್ಥಳಕ್ಕೆ ಕ್ಷಿಪಣಿ ಧ್ವಂಸಕ ಯುದ್ಧನೌಕೆ ಐಎನ್‌ಎಸ್ ಮುರ್ಮುಗೋವಾ ಅನ್ನು ಕಳಿಸಲಾಗಿದೆ. ದಾಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮತ್ತೊಂದು ತೈಲ ವಾಹಕ ನೌಕೆ ಮೇಲೆ ದಾಳಿ: 25 ಮಂದಿ ಭಾರತೀಯ ಸಿಬ್ಬಂದಿಯಿದ್ದ ಕಚ್ಚಾ ತೈಲ ವಾಹಕ ನೌಕೆಯೊಂದರ ಮೇಲೆ ದಕ್ಷಿಣ ಕೆಂಪು ಸಮುದ್ರದಲ್ಲಿ ಶನಿವಾರ ಡ್ರೋನ್ ದಾಳಿ ನಡೆದಿತ್ತು. ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ವರದಿಯಾಗಿರುವುದಾಗಿ ಭಾರತೀಯ ಅಧಿಕಾರಿಗಳು ಮತ್ತು ಅಮೆರಿಕ ಸೇನೆ ತಿಳಿಸಿತ್ತು.
ಭಾರತ ಧ್ವಜ ಹೊತ್ತ, ಗಬಾನ್ ಮಾಲೀಕತ್ವದ ಎಂವಿ ಸಾಯಿಬಾಬಾ ಹಡಗನ್ನು ಗುರಿಯಾಗಿಸಿ ಹುತಿ ಬಂಡುಕೋರರು ದಾಳಿ ನಡೆಸಿದ್ದು, 'ಭಾರತೀಯ ಹಡಗು ನೋಂದಣಿ'ಯಿಂದ ಈ ಹಡಗು ಪ್ರಮಾಣಪತ್ರ ಪಡೆದಿದೆ ಎಂದು ಅಮೆರಿಕ ಸೇನೆ ಪ್ರಕಟಣೆ ಹೊರಡಿಸಿತ್ತು.
ಕಚ್ಚಾ ತೈಲ ಹೊತ್ತು ಮಂಗಳೂರಿಗೆ ಬರುತ್ತಿದ್ದ ಎಂವಿ ಚೆಮ್ ಪ್ಲುಟೊ ದಾಳಿಗೊಳಗಾಗಿದೆ ಎಂಬ ವರದಿ ಬಂದ ಬೆನ್ನಲ್ಲೇ ಅಮೆರಿಕ ಸೇನೆಯು ಈ ಕುರಿತು ಪ್ರಕಟಣೆ ಹೊರಡಿಸಿತ್ತು.
ಇಸ್ರೇಲ್-ಹಮಾಸ್ ಸಂಘರ್ಷದ ಮಧ್ಯೆ ಇರಾನ್ ಬೆಂಬಲಿತ ಹುತಿ ಬಂಡುಕೋರರು ಕೆಂಪು ಸಮುದ್ರದಲ್ಲಿ ಹಡಗುಗಳನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಸುತ್ತಿದ್ದಾರೆ.