ಕಾಸರಗೋಡು: ಮಹಾದಾನವಾಗಿ ಪರಿಗಣಿತವಾಗಿರುವ ರಕ್ತದಾನವನ್ನು ಸಮಾಜ ಸೇವೆಯಾಗಿ ಸ್ವೀಕರಿಸಿ 51ಬಾರಿ ರಕ್ತದಾನಮಾಡಿರುವ ಅಣಂಗೂರು ಕೆ.ದಯಾನಂದ ಭಟ್ ಅವರರನ್ನು ಕಾಸರಗೋಡು ಶ್ರೀವರದರಾಜ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.
ದೇವಸ್ಥಾನದ ಆಡಳಿತ ಮಂಡಳಿ ಕ್ಷೇತ್ರದ ಸಂಕೀರ್ತನ ಸಪ್ತಾಹದ ಸಂದರ್ಭ ನಡೆದ ಗೀತಾ ಜಯಂತಿ ಆಚರಣೆ ಸಮಾರಂಭದಲ್ಲಿ ಸನ್ಮಾನ ಸಮಾರಂಭ ಆಯೋಜಿಸಲಾಗಿತ್ತು. ಇವರು 51 ಬಾರಿ ರಕ್ತದಾನ ಮಾಡಿರುವುದಲ್ಲದೆ ಅನೇಕ ಮಂದಿಯನ್ನು ರಕ್ತದಾನ ಮಾಡಲು ಪ್ರೆರೇಪಿಸಿದ್ದರು.
1996ರಲ್ಲಿ ತನ್ನ ಸ್ನೇಹಿತನಿಗೆ 2 ಯೂನಿಟ್ ರಕ್ತದ ಅವಶ್ಯಕತೆ ಬಂದು ಅದನ್ನು ದೊರಕಿಸಿ ಕೊಡಲು ಸಾಧ್ಯವಾಗದೆ ಸ್ನೇಹಿತ ಮೃತಪಟ್ಟ ವೇಳೆ ಭಟ್ ರಕ್ತದಾನದ ಅಗತ್ಯ ಮನಗಂಡು ರಕ್ತದಾನಕ್ಕೆ ಪಣತೊಟ್ಟ ದಯಾನಂದ ಭಟ್, ಮುಂದೆ ಯಾರೇ ರಕ್ತದಾನಕ್ಕಾಗಿ ಸಂಪರ್ಕಿಸಿದರೂ, ರಕ್ತದಾನ ಮಾಡುವ ನಿರ್ಧಾರ ಕೈಗೊಂಡು ಸಮಾಜ ಸೇವೆಗೆ ಧುಮುಕಿದ್ದರು. ಕಾಸರಗೋಡಿನ ಸೇವಾಭಾರತಿ ಜೀವನಿಧಿ ಸಂಘಟನೆಯಲ್ಲಿ ತೊಡಗಿಸಿಕೊಂಡು ಈ ದಾನದ ಮುಂಚೂಣಿಯಲ್ಲಿ ಅವರು ಸಕ್ರಿಯರಾಗಿದ್ದಾರೆ. ಕಾಸರಗೋಡು ಹಾಗೂ ಇತರ ಪ್ರದೇಶಗಳಿಗೂ ತೆರಳಿ ರಕ್ತದಾನ ಮಾಡುವ ಮೂಲಕ ದಯಾನಂದ ಭಟ್ ಸಮಾಜಸೇವೆಯನ್ನು ನಡೆಸುತ್ತಿರುವುದನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ.