ತಿರುವನಂತಪುರ: ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುತ್ತಿರುವ 10ನೇ ತರಗತಿಯ ಸಂಸ್ಕೃತ ವಿದ್ಯಾರ್ಥಿ ವೇತನ ಪರೀಕ್ಷೆಯಲ್ಲಿ ಸಿಪಿಎಂ ಮುಖವಾಣಿ ದೇಶಾಭಿಮಾನಿ ಪತ್ರಿಕೆಯ ಕುರಿತ ಪ್ರಶ್ನೆಯನ್ನು ಸೇರಿಸಿದ್ದಕ್ಕೆ ರಾಷ್ಟ್ರೀಯ ಶಿಕ್ಷಕರ ಪರಿಷತ್ತು(ಎನ್.ಟಿ.ಯು.) ವಿರೋಧ ವ್ಯಕ್ತಪಡಿಸಿದೆ.
ರಾಷ್ಟ್ರೀಯ ಶಿಕ್ಷಕ ಪರಿಷತ್ತಿನ ರಾಜ್ಯಾಧ್ಯಕ್ಷ ಪಿ.ಎಸ್.ಗೋಪಕುಮಾರ್ ಮಾತನಾಡಿ, ಶಿಕ್ಷಣ ಇಲಾಖೆ ಸಂಪೂರ್ಣ ಅಪಕ್ವವಾದ ಪ್ರಶ್ನೆಯನ್ನು ಸೇರಿಸುವ ಮೂಲಕ ಸಂಸ್ಕೃತ ಭಾಷೆ ಮತ್ತು ಭಾಷಾಭಿಮಾನಿಗಳಿಗೆ ಅವಮಾನ ಮಾಡಿದೆ ಎಂದಿರುವರು.
ವಿದ್ಯಾರ್ಥಿ ವೇತನ ಪರೀಕ್ಷೆಯಲ್ಲಿ 'ದೇಶಾಭಿಮಾನಿ ಸಾಹಿತ್ಯ ಪುರಸ್ಕಾರ 2023ರಲ್ಲಿ ಯಾರಿಗೆ ನೀಡಲಾಗಿದೆ' ಎಂಬುದನ್ನು 15ನೇ ಪ್ರಶ್ನೆಯಾಗಿ ಸೇರಿಸಲಾಗಿತ್ತು.ಸಂಸ್ಕೃತ ಸ್ಕಾಲರ್‍ಶಿಪ್ ಪರೀಕ್ಷೆಯು ಎಲ್‍ಪಿ, ಯುಪಿ ಮತ್ತು ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಪ್ರತಿವರ್ಷ ವಿದ್ಯಾರ್ಥಿಗಳನ್ನು ಆಕರ್ಷಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಆಯೋಜಿಸುವ ಪರೀಕ್ಷೆಯಾಗಿದೆ. ಸಂಸ್ಕೃತ ಭಾಷೆಯ ಪ್ರಚಾರ ಮತ್ತು ಅಧ್ಯಯನ ಲಕ್ಷ್ಯವಾಗಿದೆ.
ಗೋಪಕುಮಾರ್ ಅವರು ಕೇರಳದ ಸಾರ್ವಜನಿಕ ವಲಯದಲ್ಲಿ ಈ ಪ್ರಶಸ್ತಿಯು ಬಹಳ ಅಪ್ರಸ್ತುತವಾಗಿದೆ ಮತ್ತು ದೇಶಾಭಿಮಾನಿ ಓದುಗರಿಗೆ ಹೊರತುಪಡಿಸಿ ಯಾರಿಗೂ ತಿಳಿದಿಲ್ಲ ಎಂದು ಹೇಳಿದರು. ಸಂಸ್ಕೃತ ಭಾಷೆ, ಸಾಹಿತ್ಯ ಮತ್ತು ಸಾಮಾನ್ಯ ಜ್ಞಾನಕ್ಕೆ ಯಾವುದೇ ಸಂಬಂಧವಿಲ್ಲದ ಇಂತಹ ಅಪಕ್ವವಾದ ಪ್ರಶ್ನೆಯನ್ನು ಸೇರಿಸುವುದು ಸಂಪೂರ್ಣವಾಗಿ ಅನುಚಿತವಾಗಿದೆ. ಸಂಸ್ಕೃತ ವಿದ್ಯಾರ್ಥಿ ವೇತನ ಪರೀಕ್ಷೆಯ ಉದ್ದೇಶಕ್ಕೆ ಮಸಿ ಬಳಿಯುವ ಪ್ರಶ್ನೆ ಕೇಳುವವರ ಮೇಲೆ ಆಜೀವ ನಿಷೇಧ ಹೇರಲು ಶಿಕ್ಷಣ ಇಲಾಖೆ ಸಿದ್ಧವಾಗಬೇಕಿದೆ ಎಂದಿರುವರು.