ಕಾಸರಗೋಡು: ಕಣ್ಣೂರು, ಕಾಸರಗೋಡು, ಮಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಡ ರೋಗಿಗಳಿಗೆ ಪ್ರೀತಿಯ ಉಡುಗೊರೆ ಹಂಚಲಾಯಿತು. ಪಾಲವಯಲ್ ಮದ್ಯ ವಿಮುಕ್ತ ಕಾರುಣ್ಯ ಒಕ್ಕೂಟ ಹಾಗೂ ಮಂಗಳೂರು ಕ್ರೈಸ್ತ ಕೃಪಾ ಕೇಂದ್ರದ ವತಿಯಿಂದ ರೋಗಿಗಳಿಗೆ ಕಿತ್ತಳೆ, ಬ್ರೆಡ್, ಸಾಬೂನು, ಬಟ್ಟೆ ನೀಡಲಾಯಿತು. ಕ್ರಿಸ್‍ಮಸ್ ಅಂಗವಾಗಿ ಕಳೆದ 14 ವರ್ಷಗಳಿಂದ ಹಿತೈಷಿಗಳ ಸಹಕಾರದಿಂದ ಸಿಸ್ಟರ್ ಜಾನೆಟ್ ನೇತೃತ್ವದಲ್ಲಿ ಸೇವಾ ಕಾರ್ಯ ನಡೆಯುತ್ತಿದೆ. ಕಾಸರಗೋಡು ಜನರಲ್ ಆಸ್ಪತ್ರೆಯ ಡಯಾಲಿಸಿಸ್, ಕ್ಯಾನ್ಸರ್ ರೋಗಿಗಳು ಸೇರಿದಂತೆ 200ಕ್ಕೂ ಹೆಚ್ಚು ಜನರಿಗೆ ಕಿಟ್ ವಿತರಿಸಲಾಯಿತು. ಅನ್ಸಮ್ಮ, ಶಾಜು, ಮಾಹಿನ್ ಕುನ್ನಿಲ್, ಬಿಜು, ಪೀಟರ್, ಜಾಫ್ರಿನ್, ರವಿ ಮೊದಲಾದವರು ಉಪಸ್ಥಿತರಿದ್ದರು.