ಕಾಸರಗೋಡು: ಕಂದಾಯ ಜಿಲ್ಲಾ ಶಾಲಾ ಕಲೋತ್ಸವದ ನಾಲ್ಕನೇ ದಿನವಾದ ಶುಕ್ರವಾರದ ವರೆಗೆ ನಡೆದ ವೇದಿಕೇತರ ಹಾಗೂ ವೇದಿಕೆ ಸ್ಪರ್ಧೆಗಳಲ್ಲಿ ಹೊಸದುರ್ಗ ಶೈಕ್ಷಣಿಕ ಉಪಜಿಲ್ಲೆ ಮುಂಚೂಣಿಯನ್ನು ಕಾಯ್ದುಕೊಂಡಿದೆ. 438ಅಂಕಗಳೊಂದಿಗೆ ಹೊಸದುರ್ಗ ಪ್ರತಮ ಹಾಗೂ 424ಅಂಕಗಳೊಂದಿಗೆ ಕಾಸರಗೋಡು ಉಪಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಕುಂಬಳೆ, ಚೆರ್ವತ್ತೂರು, ಬೇಕಲ ಉಪ ಜಿಲ್ಲೆಗಳು ನಂತರದ ಸ್ಥಾನಗಳಲ್ಲಿದೆ. ಕಲೋತ್ಸವದ ನಾಲ್ಕನೇ ದಿನ ಜಿಲ್ಲೆಯ ಎಲ್ಲ ಶಿಕ್ಷಣ ಸಂಸ್ಥೆಗಳಿಗೂ ರಜೆ ಸಾರಿದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಭೋಜನ ವ್ಯವಸ್ಥೆಯೂ ಅಚ್ಚುಕಟ್ಟಾಗಿ ನಡೆದುಬಂದಿತ್ತು. ಒಟ್ಟು 14ವೇದಿಕೆಗಳಲ್ಲಾಗಿ ಸ್ಪರ್ಧೆಗಳು ನಡೆಯುತ್ತಿದೆ. ಶುಕ್ರವಾರ ಎಲ್ಲಾ ವೇದಿಕೆಗಳ ನಿರ್ವಹಣೆ ಶಿಕ್ಷಕಿಯರೇ ನಡೆಸಿರುವುದು ವಿಶೇಷತೆಯಾಗಿತ್ತು.
ಇಂದು ಸಮಾರೋಪ:
ಐದು ದಿವಸಗಳ ಕಾಲ ನಡೆದ ಕಂದಾಯ ಜಿಲ್ಲಾ ಶಾಲಾ ಕಲೋತ್ಸವ ಡಿ. 9ರಂದು ಸಂಪನ್ನಗೊಳ್ಳಲಿದೆ. ಸಂಜೆ 4ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಂಸದ ರಾಜ್ಮೋಹನ್ ಉಣ್ಣಿತ್ತಾನ್ ಸಮಾರೋಪ ಭಾಷಣ ಮಾಡುವರು. ಶಾಸಕ ಸಿ.ಎಚ್. ಕುಞಂಬು ಅಧ್ಯಕ್ಷತೆ ವಹಿಸುವರು.
ಪತ್ರಕರ್ತರಿಗೆ ತಡೆ:
ಕಲೋತ್ಸವ ವರದಿಗಾಗಿ ತೆರಳುತ್ತಿದ್ದ ದೃಶ್ಯಮಾಧ್ಯಮದ ಪತ್ರಕರ್ತರನ್ನು ಕಲೋತ್ಸವದ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ಕಾರ್ಯಕರ್ತರು ತಡೆದು, ಅವಾಚ್ಯವಾಗಿ ನಿಂದಿಸಿದ ಘಟನೆ ನಡೆದಿದೆ. ದೃಶ್ಯಮಾಧ್ಯಮದವರು ತಮ್ಮ ವಾಹನವನ್ನು ವೇದಿಕೆಗಳಿರುವ ಪ್ರದೇಶಕ್ಕೆ ಕೊಂಡೊಯ್ಯದಂತೆ ಸ್ವಯಂಸೇವಕರು ತಡೆದಿರುವುದಲ್ಲದೆ, ಕ್ಯಾಮರಾಮೆನ್, ವರದಿಗಾರರ ಮೇಲೆ ಹಲ್ಲೆಗೂ ಮುಂದಾಗಿದ್ದಾರೆ. ಟ್ರೈಪ್ಯಾಡ್, ಕ್ಯಾಮರಾ ಹೊತ್ತುಕೊಂಡು ತೆರಳಲಾಗುತ್ತಿಲ್ಲ, ಪತ್ರಕರ್ತರನ್ನು ಇಳಿಸಿ ವಾಹನ ಹೊರಕ್ಕೆ ನಿಲ್ಲಿಸುವುದಾಗಿ ಕೇಳಿಕೊಂಡರೂ, ಇದಕ್ಕೆ ಆಸ್ಪದ ನೀಡದೆ ಕೆಲವು ಸ್ವಯಂಸೇವಕರು ದರ್ಪ ತೋರಿಸುತ್ತಿದ್ದಾರೆ ಎಂದು ಪತ್ರಕರ್ತರು ದೂರಿದ್ದಾರೆ. ಸುದ್ದಿಗೋಷ್ಟಿ ನಡೆಸಿ,ಪತ್ರಕರ್ತರಿಗೆ ಎಲ್ಲ ರೀತಿಯ ಸೌಕರ್ಯ ಒದಗಿಸಿಕೊಡುವುದಾಗಿ ಭರವಸೆ ನೀಡಿರುವ ಸಮಿತಿ ಪದಾಧಿಕಾರಿಗಳು, ಇಂತಹ ಸ್ವಯಂಸೇವಕರ ಬಗ್ಗೆ ನಿಗಾವಹಿಸದಿರುವ ಬಗ್ಗೆ ಪತ್ರಕರ್ತರು ತಮ್ಮ ಅಸಮಧಾನ ವಯಕ್ತಪಡಿಸಿದ್ದಾರೆ.