ನವದೆಹಲಿ: ವಿದೇಶಗಳಿಂದ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿ ದೇಶದ ಬೇರೆ ಬೇರೆ ಕಡೆಗಳಲ್ಲಿ ವಾಸಿಸುತ್ತಿರುವವರ ಮಾಹಿತಿಯನ್ನು ಕಲೆಹಾಕುವುದು ಆಗದ ಕೆಲಸ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮಂಗಳವಾರ ತಿಳಿಸಿದೆ. ದೇಶದೊಳಕ್ಕೆ ಅಕ್ರಮವಾಗಿ ಪ್ರವೇಶಿಸುವವರು ಆ ಕೆಲಸವನ್ನು ರಹಸ್ಯವಾಗಿ ಮಾಡಿರುತ್ತಾರೆ.
ಈ ಕಾರಣ, ಮಾಹಿತಿ ಕಲೆ ಹಾಕುವುದು ಕಷ್ಟ ಎಂದು ಕೇಂದ್ರ ಹೇಳಿದೆ. ಅಸ್ಸಾಂನಲ್ಲಿನ ಅಕ್ರಮ ವಲಸಿಗರಿಗೆ ಸಂಬಂಧಿಸಿದಂತೆ, ಪೌರತ್ವ ಕಾಯ್ದೆಯ ಸೆಕ್ಷನ್ 6ಎ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಪರಿಶೀಲಿಸುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರವು ಪ್ರಮಾಣಪತ್ರವೊಂದನ್ನು ಸಲ್ಲಿಸಿದೆ. ಸೆಕ್ಷನ್ 6ಎ ಅಡಿಯಲ್ಲಿ 17,861 ಜನರಿಗೆ ಪೌರತ್ವ ನೀಡಲಾಗಿದೆ ಎಂದು ಕೇಂದ್ರ ತಿಳಿಸಿದೆ.
1971ರ ಮಾರ್ಚ್ 25ರ ನಂತರದಲ್ಲಿ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ವಿದೇಶಿಯರ ಸಂಖ್ಯೆ ಎಷ್ಟು ಎಂದು ಕೋರ್ಟ್ ಕೇಳಿದ್ದ ಪ್ರಶ್ನೆಗೆ ಉತ್ತರ ನೀಡಿರುವ ಕೇಂದ್ರವು, 'ಅಕ್ರಮವಾಗಿ ಬರುವವರು ಪ್ರಯಾಣ ದಾಖಲೆಗಳನ್ನು ಹೊಂದಿರುವುದಿಲ್ಲ. ಅವರು ರಹಸ್ಯವಾಗಿ ದೇಶ ಪ್ರವೇಶಿಸುತ್ತಾರೆ' ಎಂಬ ಉತ್ತರ ನೀಡಿದೆ.
'ದೇಶದಲ್ಲಿ ಅಕ್ರಮವಾಗಿ ವಾಸ ಮಾಡುತ್ತಿರುವ ವಿದೇಶಿ ಪ್ರಜೆಗಳನ್ನು ಗುರುತಿಸುವ, ಬಂಧಿಸುವ ಹಾಗೂ ಅವರನ್ನು ವಾಪಸ್ ಅವರ ದೇಶಕ್ಕೆ ಕಳುಹಿಸುವ ಕೆಲಸ ಸಂಕೀರ್ಣವಾದುದು, ಆ ಕೆಲಸ ನಡೆಯುತ್ತಿರುತ್ತದೆ' ಎಂದು ಕೂಡ ಕೇಂದ್ರವು ವಿವರಿಸಿದೆ. 2017ರಿಂದ 2022ರ ನಡುವಿನ ಅವಧಿಯಲ್ಲಿ 14,346 ವಿದೇಶಿ ಪ್ರಜೆಗಳನ್ನು ಪುನಃ ಅವರ ದೇಶಕ್ಕೆ ಕಳುಹಿಸಲಾಗಿದೆ ಎಂಬ ಮಾಹಿತಿ ನೀಡಿದೆ.
ಅಸ್ಸಾಂ ರಾಜ್ಯದಲ್ಲಿನ ಅಕ್ರಮ ವಲಸಿಗರಿಗೆ ಸಂಬಂಧಿಸಿದ ಸೆಕ್ಷನ್ 6ಎ ಸಿಂಧುತ್ವ ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ನೇತೃತ್ವದ ಸಂವಿಧಾನ ಪೀಠವು ನಡೆಸಿದೆ. ಈ ಅರ್ಜಿಗಳಿಗೆ ಸಂಬಂಧಿಸಿದ ತೀರ್ಪನ್ನು ಪೀಠವು ಕಾಯ್ದಿರಿಸಿದೆ.