ಚೆನ್ನೈ: ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಂಡಿರುವ ಪರಿಣಾಮ ತಮಿಳುನಾಡಿನಲ್ಲಿ ಭಾರಿ ಮಳೆಯಾಗುತ್ತಿದ್ದು ಪರಿಣಾಮ ರಾಜಧಾನಿ ಚೆನ್ನೈ ಸೇರಿದಂತೆ ತಮಿಳುನಾಡಿನ ಕರಾವಳಿ ಜಿಲ್ಲೆಗಳಲ್ಲಿ ರಸ್ತೆಗಳು ಜಲಾವೃತವಾಗಿವೆ.
ಮಿಚಾಂಗ್ ಚಂಡಮಾರುತ ಪರಿಣಾಮ ತಮಿಳುನಾಡಿನ ಹಲವು ಭಾಗಗಳಲ್ಲಿ ಡಿಸೆಂಬರ್ 5ರವರೆಗೆ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ. ರಾಜಧಾನಿ ಚೆನ್ನೈ, ತಿರುವಲ್ಲೂರು, ಚೆಂಗಲ್‌ಪಟ್ಟು ಮತ್ತು ಕಾಂಚೀಪುರಂ ಜಿಲ್ಲಾಡಳಿತಗಳು ಇಂದು (ಸೋಮವಾರ) ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಿವೆ.
ಬೀಚ್‌ಗಳಿಗೆ ಜನರು ಭೇಟಿ ನೀಡಬಾರದು ಎಂದು ಗ್ರೇಟರ್ ಚೆನ್ನೈ ಪೊಲೀಸರು ಸೂಚಿಸಿದ್ದಾರೆ. ತಿರುವಲ್ಲೂರು ಮತ್ತು ಚೆನ್ನೈ ಜನರು ಡಿ.4 ಮತ್ತು 5ರಂದು ಮನೆಯ ಒಳಗೇ ಇರುವಂತೆ ಐಎಂಡಿ ತಿಳಿಸಿದೆ. ಡಿ.3ರಿಂದ 7ರವರೆಗೆ ಸುಮಾರು 144 ರೈಲುಗಳ ಸೇವೆಯನ್ನು ರದ್ದಾಗಿವೆ. ಚೆನ್ನೈ ವಿಮಾನ ನಿಲ್ದಾಣದ ರನ್ ವೇ ಮೇಲೆ ಮಳೆನೀರು ನಿಂತ ಪರಿಣಾಮ ವಿಮಾನ ಸಂಚಾರ ಸ್ಥಗಿತವಾಗಿದೆ.
ತಮಿಳುನಾಡಿನ ಚೆನ್ನೈ, ತಿರುವಳ್ಳೂರು, ಚೆಂಗಲ್‌ಪಟ್ಟು ಮತ್ತು ಕಾಂಚೀಪುರಂ, ತಿರುವಣ್ಣಾಮಲೈ, ವಿಲ್ಲುಪುರಂ, ಕಡಲೂರು, ಮೈಲಾಡುತುರೈ, ತಂಜಾವೂರು, ಅರಿಯಲೂರು, ಪೆರಂಬಲೂರು, ಕಲ್ಲಕುರಿಚ್ಚಿ, ವೆಲ್ಲೂರು, ತಿರುಪತ್ತೂರು, ಧರ್ಮಪುರಿ, ಕೃಷ್ಣಗಿರಿ ಸೇಲಂ, ನಾಮಕ್ಕಲ್ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಬಂಗಾಳಕೊಲ್ಲಿಯಲ್ಲಿ ಡಿ.3ರ ವೇಳೆಗೆ ಚಂಡಮಾರುತ ರೂಪುಗೊಂಡಿದ್ದು, ಅದು ಡಿ.4ರಂದು ಅಂದರೆ ಇಂದು ಆಂಧ್ರಪ್ರದೇಶ, ತಮಿಳುನಾಡು ಕರಾವಳಿಗೆ ಅದು ಅಪ್ಪಳಿಸಲಿದೆ. ಇದರ ಪರಿಣಾಮ 16 ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಎಚ್ಚರಿಕೆ ನೀಡಿದ ಬೆನ್ನಲ್ಲೇ ತಮಿಳುನಾಡು ಸರ್ಕಾರ ಈ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಈ ಚಂಡಮಾರುತಕ್ಕೆ ಮ್ಯಾನ್ಮಾರ್ ಸಲಹೆಯಂತೆ ‘ಮಿಚಾಂಗ್’ ಎಂದು ಹೆಸರಿಡಲಾಗಿದೆ.