ನ್ಯೂಯಾರ್ಕ್: ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಪಾರ್ಶ್ವವಾಯು ಸ್ಥಿತಿಯಲ್ಲಿದ್ದು, ಜಾಗತಿಕ ಪ್ರಬಲ ರಾಷ್ಟ್ರಗಳ ಸೇವೆಯ ಗುರಿ ಹೊಂದಿದೆ ಎಂದು ವಿಶ್ವಸಂಸ್ಥೆ ಸಾಮಾನ್ಯ ಸಭೆಯ (ಯುಎನ್‌ಜಿಎ) ಅಧ್ಯಕ್ಷ ಡೆನ್ನಿಸ್ ಫ್ರಾನ್ಸಿಸ್ ಹೇಳಿದ್ದಾರೆ.
ಯುಎನ್‌ಜಿಎ 78ನೇ ಅಧಿವೇಶನದ ಅಧ್ಯಕ್ಷರಾಗಿರುವ ಅವರು, ಸುಧಾರಿತ ಮಂಡಳಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ವಿಚಾರದಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಪ್ರಾತಿನಿಧ್ಯ ಸಮಾನ ಪಾಲ್ಗೊಳ್ಳುವಿಕೆಯ ಅಗತ್ಯವನ್ನು ಒತ್ತಿ ಹೇಳಿದ್ದಾರೆ.
'ಸುಧಾರಣೆ ಎಂಬುದು ನಮ್ಮ ಸಾಮೂಹಿಕ ಕೆಲಸ ಮತ್ತು ಜವಾಬ್ದಾರಿ' ಎಂದಿರುವ ಫ್ರಾನ್ಸಿಸ್, ಹೆಚ್ಚು ಸಮತೋಲಿತ, ಜವಾಬ್ದಾರಿಯುತ, ಪ್ರಜಾಪ್ರಭುತ್ವವಾದಿ ಮತ್ತು ಪಾರದರ್ಶಕವಾಗಿರುವ ಭದ್ರತಾ ಮಂಡಳಿ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
ಜಗತ್ತಿನಾದ್ಯಂತ ಸಂಘರ್ಷಗಳು ಹೆಚ್ಚಾಗುತ್ತಿರುವ ಹೊತ್ತಿನಲ್ಲಿ, ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವುದು ಭದ್ರತಾ ಮಂಡಳಿಯ ಪ್ರಾಥಮಿಕ ಜವಾಬ್ದಾರಿ. ಆದರೆ ಮಂಡಳಿಯು ಪಾರ್ಶ್ವವಾಯು ಸ್ಥಿತಿಯಲ್ಲಿ ಸಿಕ್ಕಿಕೊಂಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.