ನವದೆಹಲಿ: ಛತ್ತೀಸಗಢ ಮಹಾದೇವ್ ಬೆಟ್ಟಿಂಗ್ ಆಯಪ್ ಮಾಲೀಕರಲ್ಲಿ ಒಬ್ಬರಾದ ರವಿ ಉಪ್ಪಾಳ್ ಅವರನ್ನು ಸ್ಥಳೀಯ ಪೊಲೀಸರು ದುಬೈನಲ್ಲಿ ಬಂಧಿಸಿದ್ದಾರೆ.
ಜಾರಿ ನಿರ್ದೇಶನಾಲಯದ(ಇ.ಡಿ) ಆದೇಶದ ಮೇರೆಗೆ ಇಂಟರ್‌ಪೋಲ್ ಹೊರಡಿಸಿದ ರೆಡ್ ನೋಟಿಸ್ ಆಧಾರದ ಮೇಲೆ ಸ್ಥಳೀಯ ಪೊಲೀಸರು ದುಬೈನಲ್ಲಿ ವಶಕ್ಕೆ ಪಡೆದಿದ್ದಾರೆ ಎಂದು ಅಧಿಕೃತ ಮೂಲಗಳು ಬುಧವಾರ ತಿಳಿಸಿವೆ.
ಕಳೆದ ವಾರ ರವಿ ಉಪ್ಪಾಳ್‌ನನ್ನು ದುಬೈನಲ್ಲಿ ಬಂಧಿಸಲಾಗಿದೆ. ಆತನನ್ನು ಭಾರತಕ್ಕೆ ಗಡಿಪಾರು ಮಾಡಲು ಇ.ಡಿ ಅಧಿಕಾರಿಗಳು ದುಬೈ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೆಟ್ಟಿಂಗ್ ಆಯಪ್ ಮೂಲಕ ಅಕ್ರಮ ಹಣ ವರ್ಗಾವಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಛತ್ತೀಸಗಢ, ಮುಂಬೈ ಮತ್ತು ಇ.ಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದರು.
ರವಿ ಉಪ್ಪಾಳ್ ಪೆಸಿಫಿಕ್ ಮಹಾಸಾಗರದ ದ್ವೀಪ ರಾಷ್ಟ್ರ ವನೌಟುದ ಪೌರತ್ವ ಪಡೆದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸೌರಭ್ ಚಂದ್ರಕಾರ್ ಮತ್ತು ರವಿ ಉಪ್ಪಾಳ್ ಆರಂಭಿಸಿದ್ದ ಮಹಾದೇವ್ ಬೆಟ್ಟಿಂಗ್ ಆಯಪ್ ದುಬೈನಿಂದ ಕಾರ್ಯಾಚರಣೆ ನಡೆಸುತ್ತಿತ್ತು. ಇದು ಬೇನಾಮಿ ಖಾತೆಗಳ ಮೂಲಕ ಹಣ ಅಕ್ರಮ ವರ್ಗಾವಣೆ ಮಾಡುತ್ತಿತ್ತು ಎಂದು ಇ.ಡಿ ಆರೋಪಿಸಿದೆ. ಬೆಟ್ಟಿಂಗ್ ಆದಾಯವನ್ನು ವಿದೇಶದ ಖಾತೆಗಳಿಗೆ ವರ್ಗಾಯಿಸಲು ದೊಡ್ಡ ಪ್ರಮಾಣದ ಹವಾಲಾ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿತ್ತು ಎಂದು ಅದು ಹೇಳಿದೆ.