ಕೊಟ್ಟಯಂ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕೇರಳ ಸರ್ಕಾರವನ್ನು ಭೀಕರ ಆರ್ಥಿಕ ಸಂಕಷ್ಟಕ್ಕೆ ದೂಡಿದೆ ಎಂದು ಆರೋಪಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಜ್ಯದ ಸಾಂವಿಧಾನಿಕ ಹಕ್ಕುಗಳನ್ನು ಪುನಃಸ್ಥಾಪಿಸಲು ಸುಪ್ರೀಂ ಕೋರ್ಟ್ ಮೊರೆ ಹೋಗಿರುವುದಾಗಿ ಹೇಳಿದ್ದಾರೆ.
ಕೊಟ್ಟಯಂ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕೇರಳ ಸರ್ಕಾರವನ್ನು ಭೀಕರ ಆರ್ಥಿಕ ಸಂಕಷ್ಟಕ್ಕೆ ದೂಡಿದೆ ಎಂದು ಆರೋಪಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಜ್ಯದ ಸಾಂವಿಧಾನಿಕ ಹಕ್ಕುಗಳನ್ನು ಪುನಃಸ್ಥಾಪಿಸಲು ಸುಪ್ರೀಂ ಕೋರ್ಟ್ ಮೊರೆ ಹೋಗಿರುವುದಾಗಿ ಹೇಳಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧದ ಕಾನೂನು ಹೋರಾಟದ ಬಗ್ಗೆ ವಿವರಿಸಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಇರುವ ಸಂವಿಧಾನದ ಪರಿಚ್ಛೇದ 131ರ ಅಡಿ ಆದೇಶಿಸುವಂತೆ ಕೋರಲಾಗಿದೆ ಎಂದರು.
ಕೇಂದ್ರ ಸರ್ಕಾರದ ಅಸಂವಿಧಾನಿಕ, ಕಾನೂನು ಬಾಹಿರ ಹಣಕಾಸು ಕ್ರಮಗಳು ರಾಜ್ಯವನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿವೆ ಎಂದು ಆರೋಪಿಸಿ ಕೇರಳ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಒಂದು ದಿನದ ಬಳಿಕ ವಿಜಯನ್ ಈ ಸ್ಪಷ್ಟನೆ ನೀಡಿದ್ಧಾರೆ.
ತಾರತಮ್ಯದಿಂದ ಕೂಡಿದ ಕ್ರಮಗಳನ್ನು ನಿಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಪದೇ ಪದೇ ಮನವಿ ಮಾಡಿದ್ದರೂ ಕೇಂದ್ರವು ತನ್ನ ಸೇಡಿನ ಕ್ರಮಗಳನ್ನು ಮತ್ತಷ್ಟು ತೀವ್ರಗೊಳಿಸಿದ್ದಲ್ಲದೇ ಕೇರಳ ಆರ್ಥಿಕತೆಗೆ ಧಕ್ಕೆ ತಂದಿದೆ ಎಂದು ಆರೋಪಿಸಿದ್ದಾರೆ.
ರಾಜ್ಯದ ಆರ್ಥಿಕ ಸ್ವಾಯತ್ತತೆಯ ಮೇಲೆ ಕೇಂದ್ರವು ಅತಿಕ್ರಮಣ ಮಾಡುವುದನ್ನು ನಿಲ್ಲಿಸಬೇಕು, ಇಲ್ಲದಿದ್ದರೆ, ಕೇರಳವು ತೀವ್ರ ಆರ್ಥಿಕ ಸಂಕಷ್ಟಕ್ಕೆ ದೂಡಲ್ಪಡುತ್ತದೆ ಎಂದು ಸಿಎಂ ಎಚ್ಚರಿಸಿದರು.
ಈ ಹಿನ್ನೆಲೆಯಲ್ಲಿ ಸಂವಿಧಾನದ ಒಕ್ಕೂಟ ವ್ಯವಸ್ಥೆಯ ತತ್ವಗಳನ್ನು ಬಲಿಕೊಡುವ ಮೂಲಕ ಕೇರಳವನ್ನು ಸಂಕಷ್ಟಕ್ಕೆ ದೂಡುತ್ತಿರುವ ಕೇಂದ್ರದ ತಾರತಮ್ಯ ಕ್ರಮಗಳ ವಿರುದ್ಧ ರಾಜ್ಯ ಸರಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ರಾಜ್ಯಗಳ ಹಣಕಾಸು ವ್ಯವಹಾರಗಳಲ್ಲಿ ಕೇಂದ್ರದ ಅಸಂವಿಧಾನಿಕ ಹಸ್ತಕ್ಷೇಪವನ್ನು ತಡೆಯುವಂತೆ ಸುಪ್ರೀಂ ಕೋರ್ಟ್ ಅನ್ನು ಒತ್ತಾಯಿಸುವ ಮೂಲಕ ರಾಜ್ಯ ಸರ್ಕಾರಗಳ ಸಾಂವಿಧಾನಿಕ ಹಕ್ಕುಗಳನ್ನು ಮರುಸ್ಥಾಪಿಸಲು ಅರ್ಜಿಯಲ್ಲಿ ಕೋರಲಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂವಿಧಾನದಲ್ಲಿ ಒಳಗೊಂಡಿರದ ಅಧಿಕಾರಗಳನ್ನು ಚಲಾಯಿಸುವ ಮೂಲಕ ರಾಜ್ಯಗಳ ಸಾಂವಿಧಾನಿಕ ಅಧಿಕಾರಗಳನ್ನು ಅತಿಕ್ರಮಿಸುವ ಕೇಂದ್ರದ ಕ್ರಮಗಳನ್ನು ತಡೆಯಲು ಮನವಿ ಮಾಡಲಾಗಿದೆ. ಜಿಎಸ್‌ಟಿ ಪರಿಹಾರ ನೀಡುವಲ್ಲಿ ಕೇಂದ್ರದ ವೈಫಲ್ಯ ಮತ್ತು ರಾಜ್ಯದ ಆದಾಯ ಕೊರತೆ, ಅನುದಾನ ಕಡಿತ ಕೇರಳವನ್ನು ಆರ್ಥಿಕವಾಗಿ ಹಿಂಡಿದೆ ಎಂದು ಅವರು ಹೇಳಿದ್ದಾರೆ.