ಕಣ್ಣೂರು: ಅಯ್ಯನ್ ಕುನ್ನು ಶಿಕಾಕತೋಟ್ ಎಂಬಲ್ಲಿ ನಡೆದ ಗುಂಡಿನ ದಾಳಿಯಲ್ಲಿ ನಕ್ಸಲ್ ವ್ಯಕ್ತಿಯೊಬ್ಬ ಹತನಾದ ಎಂಬ ಭಿತ್ತಿಪತ್ರ ಕಂಡುಬಂದಿದೆ.
ನಕ್ಸಲ್ ಪಶ್ಚಿಮಘಟ್ಟ ವಿಶೇಷ ಪ್ರದೇಶ ಸಮಿತಿಯ ಹೆಸರಿನಲ್ಲಿ ತಿರುನೆಲ್ಲಿಯಲ್ಲಿ ಹಾಕಲಾಗಿರುವ ಪೋಸ್ಟರ್‍ನಲ್ಲಿ ಹೀಗೆ ಹೇಳಲಾಗಿದೆ. ನವೆಂಬರ್ 13 ರಂದು ಬೆಳಿಗ್ಗೆ 10 ಗಂಟೆಗೆ ನಡೆದ ಎನ್‍ಕೌಂಟರ್‍ನಲ್ಲಿ ಸಾವು ಸಂಭವಿಸಿದೆ ಎಂದು ವರದಿಯಾಗಿದೆ. ಕವಿತಾ ಅಲಿಯಾಸ್ ಲಕ್ಷ್ಮಿಯನ್ನು ಹತ್ಯೆ ಮಾಡಲಾಗಿದ್ದು, ಬದಲಿಗೆ ಪ್ರತೀಕಾರವಾಗಿ ಹತ್ಯೆ ಎಸಗಲಾಗುವುದು ಎಂದು ನಕ್ಸಲರು ಪೋಸ್ಟರ್ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಸಾವಿನ ಕುರಿತು ಪೋಲೀಸರು ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ. ಸೆಪ್ಟೆಂಬರ್ 24 ರಂದು ತಲಪುಳದಲ್ಲಿ ಅರಣ್ಯ ಅಭಿವೃದ್ಧಿ ನಿಗಮ ಕಚೇರಿಯನ್ನು ಧ್ವಂಸ ಮಾಡಿದ ನಂತರ ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಕ್ಸಲ್ ತಂಡ ಹಿಂಸಾಚಾರ ಹೆಚ್ಚಿಸಿತ್ತು. ನವೆಂಬರ್ 7 ರಂದು, ನಕ್ಸಲ್ ತಂಡ ಚಪ್ಪರಂ ಕಾಲೋನಿಯಲ್ಲಿ ಹಿಂಸಾಚಾರವನ್ನು ಪ್ರಾರಂಭಿಸಿದರು ಮತ್ತು ಪೋಲೀಸರು ಅವರಲ್ಲಿ ಇಬ್ಬರನ್ನು ಬಂಧಿಸಿದ್ದರು.
ಇದರ ಬೆನ್ನಲ್ಲೇ, ನವೆಂಬರ್ 13 ರಂದು ಕಣ್ಣೂರು ಅಯ್ಯಂಕುನ್ನು ಶಿಕಾಕತೋಟ್ ಅರಣ್ಯ ಪ್ರದೇಶದಲ್ಲಿ ಥಂಡರ್ಬೋಲ್ಟ್ ನೊಂದಿಗೆ ಎನ್ಕೌಂಟರ್ ಸಂಭವಿಸಿದೆ. ಮರುದಿನ ಅರಣ್ಯ ಪ್ರದೇಶದಲ್ಲಿ ಬಂದೂಕು ವಶಪಡಿಸಿಕೊಳ್ಳಲಾಗಿದ್ದು, ಕೆಲವರಿಗೆ ಗಾಯಗಳಾಗಿವೆ ಎಂದು ಪೋಲೀಸರು ಮಾಹಿತಿ ನೀಡಿದ್ದರು. ಈ ಎನ್‍ಕೌಂಟರ್‍ನಲ್ಲಿ ಗಾಯಗೊಂಡಿದ್ದ ನಕ್ಸಲ್ ತಂಡದ ಓರ್ವರು ಹತರಾಗಿರಬೇಕು ಎಂಬುದು ಪ್ರಾಥಮಿಕ ತೀರ್ಮಾನ. ಅವರು ಹೇಗೆ ಹತ್ಯೆಯಾದರು ಎಂಬ ವಿವರ ಇನ್ನೂ ಹೊರಬಿದ್ದಿಲ್ಲ.