ನಾವೀಗ ಡಿಜಿಟಲ್ ಯುಗದಲ್ಲಿದ್ದೇವೆ. ಮೊಬೈಲ್ ಅನ್ನು ದಿನ ಅಥವಾ ನಿಮಿಷವೂ ಬಿಟ್ಟಿರಲಾಗದ ಸ್ಥಿತಿಗೆ ಬಂದಿದ್ದೇವೆ. ನಮ್ಮೆಲ್ಲಾ ಕಾರ್ಯಗಳಿಗಾಗಿ ನಾವಿಂದು ಮೊಬೈಲ್ ದಾಸರಾಗಿದ್ದೇವೆ. ನೀವೊಮ್ಮೆ ಯೋಚಿಸಿ ಮೊಬೈಲ್ ಇಲ್ಲದೆ ನಾವು ಯಾವೆಲ್ಲಾ ಕೆಲಸ ಮಾಡುತ್ತೇವೆ ಅಂತ. ಹೆಚ್ಚು ಕಡಿಮೆ ಯಾವ ಕೆಲಸವನ್ನೂ ನಾವಿಂದು ಮೊಬೈಲ್ ಇಲ್ಲದೆ ಮಾಡುತ್ತಿಲ್ಲ.
ಹೀಗಾಗಿ ಮೊಬೈಲ್‌ನಲ್ಲಿ ಅಗತ್ಯವಿರಲಿ ಇಲ್ಲದಿರಲಿ ನಮ್ಮೆಲ್ಲಾ ದಾಖಲೆಗಳ ಸಂಗ್ರಹಿಸಿದ್ದೇವೆ. ಹಣಕಾಸಿನಿಂದ ಹಿಡಿದು ನಮ್ಮ ವೈಯಕ್ತಿಕ ದಾಖಲೆಗಳ ಒಟ್ಟುಮಾಡಿಟ್ಟಿದ್ದೇವೆ. ಒಂದು ವೇಳೆ ಮೊಬೈಲ್ ಕಳೆದರೆ ನಮ್ಮ ಜೀವನವೇ ಇಕ್ಕಟ್ಟಿಗೆ ಸಿಕ್ಕಂತಾಗುತ್ತದೆ. ಹೀಗಿರುವಾಗ ನಮ್ಮ ಮೊಬೈಲ್ ಹ್ಯಾಕ್ ಆಗಿದ್ದರೆ ಏನು ಕಥೆ?ಹೌದು ನಮ್ಮ ಮೊಬೈಲ್ ಏನಾದರೂ ಹ್ಯಾಕ್ ಆದರೆ ನಾವು ಯವುದೋ ಬಲೆಯಲ್ಲಿ ಸಿಲುಕಿದಂತಾಗುತ್ತದೆ. ಏಕೆಂದರೆ ನಮ್ಮ ಎಲ್ಲಾ ದಾಖಲೆಗಳು, ಮಾಹಿತಿಗಳು ಬೇರೆಯವರ ಪಾಲಾದರೆ ಹೇಗಾಗುತ್ತೆ ಯೋಚಿಸಿ. ಇತ್ತೀಚಿಗೆ ಮೊಬೈಲ್ ಹ್ಯಾಕಿಂಗ್ ಪ್ರಕರಣ ಸಂಖ್ಯೆ ಹೆಚ್ಚಾಗಿದ್ದು, ಅನೇಕರು ಸೈಬರ್ ಕ್ರೈಂ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಾರೆ. ಹಾಗಾದ್ರೆ ನಿಮ್ಮ ಫೋನ್ ಕೂಡ ಹ್ಯಾಕ್ ಆಗಿದ್ಯಾ ಎಂದು ಚೆಕ್ ಮಾಡುವುದು ಹೇಗೆ? ಇಲ್ಲಿದೆ ನೋಡಿ ಕೆಲ ಟಿಪ್ಸ್.
ನಿಮ್ಮ ಫೋನ್ ಬ್ಯಾಟರಿ ಏಕಾಏಕಿ ಕಡಿಮೆಯಾಗುತ್ತಿದ್ದರೆ ನೀವು ಬಳಸುತ್ತಿರುವ ಮೊಬೈಲ್ ಫೋನ್‌ನ ಬ್ಯಾಟರಿ ಏಕಾಏಕಿ ಅಥವಾ ಅವಧಿಗೂ ಮುನ್ನವೇ ಚಾರ್ಚ್ ಇಳಿಕೆಯಾಗುತ್ತಿದ್ದರೆ ಎಚ್ಚರ ವಹಿಸಿ ಇದು ಹ್ಯಾಕ್ ಆಗಿರುವ ಸಂಭವವಿರಬಹುದು. ಏಕೆಂದರೆ ಹ್ಯಾಕರ್‌ಗಳು ನಿಮ್ಮ ಮೊಬೈಲ್‌ನಲ್ಲಿರುವ ದಾಖಲೆ ಪಡೆಯಬೇಕಾದರೆ ಅದನ್ನು ಬಳಸಬೇಕು. ಹೀಗೆ ಬಳಸಿದಾಗ ಮೊಬೈಲ್‌ನಲ್ಲಿ ಅನಿರೀಕ್ಷಿತ ಬದಲಾವಣೆ ಕಾಣಬಹುದು ಇದರಲ್ಲಿ ಬ್ಯಾಟರಿ ಚಾರ್ಚ್ ಕಡಿಮೆಯಾಗುವುದು ಸಹ ಒಂದಾಗಿದೆ. ನಿಮ್ಮ ಮೊಬೈಲ್ ಫೋನ್ ಬ್ಯಾಟರಿ ನೀವಂದುಕೊಂಡಂತೆ ಕೆಲಸ ಮಾಡುತ್ತಿಲ್ಲ ಎಂದೆನಿಸಿದರೆ ಎಚ್ಚರಿಕೆ ವಹಿಸುವುದು ಅಗತ್ಯ.
ಬಹುಬೇಗ ಬಿಸಿಯಾಗುತ್ತಿದ್ದರೆ
ಮೊಬೈಲ್ ಫೋನ್‌ಗಳು ಹೆಚ್ಚು ಸಮಯ ಬಳಸಿದಾಗ ಬಿಸಿಯಾಗುತ್ತವೆ. ಅಥವಾ ಹೊರಗಿನ ಬಿಸಿಲಲ್ಲಿ ಬಳಸಿದಾಗ ಬೇಗನೆ ಬಿಸಿಯಾಗುತ್ತವೆ. ಆದರೆ ನೀವು ಮೊಬೈಲ್ ಬಳಸಲು ಆರಂಭಿಸಿದ ತಕ್ಷಣದಿಂದಲೇ ಬಿಸಿಯಾಗುತ್ತಿರುವ ಅನುಭವವಾದರೆ ಅದರಲ್ಲಿ ಸಮಸ್ಯೆ ಇದೆ ಎಂದರ್ಥ.
ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವಿಚಿತ್ರ ಅಪ್‌ಡೇಟ್ಸ್
ಇನ್ನು ನಿಮ್ಮ ಮೊಬೈಲ್ ಮೂಲಕ ನೀವು ಫೇಸ್‌ಬುಕ್, ಇನ್ಸ್‌ಸ್ಟಾಗ್ರಾಮ್, ಎಕ್ಸ್, ವಾಟ್ಸಾಪ್ ಹೀಗೆ ಹತ್ತಾರು ಖಾತೆಗಳ ನಿಭಾಯುಸುತ್ತೀರಿ. ಆದರೆ ನಿಮ್ಮ ಗಮನಕ್ಕೆ ಬಾರದೆ ನಿಮ್ಮ ಖಾತೆಯಲ್ಲಿ ಏನಾದರೂ ಅಪ್‌ಡೇಟ್‌ಗಳು ಕಂಡರೆ ನಿಮ್ಮ ಫೋಣ್ ಅನ್ನು ಬೇರೆ ಯಾರೋ ಬಳಸುತ್ತಿದ್ದಾರೆ ಎಂದರ್ಥ.
ಫೋನ್ ಪ್ರತಿಕ್ರಿಯೆ ನಿಧಾನವಾಗಿದ್ದರೆ
ನಿಮ್ಮ ಮೊಬೈಲ್ ಫೋನ್ ಬಳಸುವಾಗ ನಿಧಾನವಾಗಿದ್ದರೆ, ಅಥವಾ ನೀವು ಬಳಸುವ ವೇಳೆ ನಿಮ್ಮ ಆದೇಶಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದರೆ ಅದು ಸಮಸ್ಯೆಗೆ ಕಾರಣವಾಗಿರಬಹುದು. ಪ್ರತಿಕ್ರಿಯೆ ನೀಡುವ ವೇಗ ನಿಧಾನವಾಗಿದ್ದರೆ ಆ ಆದೇಶದ ಪ್ರತಿಯಾಗಿ ಮತ್ತೊಂದು ಆದೇಶ ನಿಮ್ಮ ಫೋನ್‌ಗೆ ನೀಡಲಾಗುತ್ತಿದೆ ಎಂದರ್ಥ. ಇದು ಹ್ಯಾಕರ್‌ಗಳ ಮೂಲಕ ನಿಯಂತ್ರಣದಲ್ಲಿದೆ ಎಂದರ್ಥ.
ನೀವು ಡೌನ್‌ಲೋಡ್ ಮಾಡಿದ ಆ್ಯಪ್ ಕಾಣದಿದ್ದರೆ
ಹ್ಯಾಕರ್ಸ್‌ಗಳು ಹೆಚ್ಚಾಗಿ ಹಿಡನ್ ಆ್ಯಪ್‌ಗಳ ಮೂಲಕ ಕೆಲಸ ಮಾಡುತ್ತಾರೆ. ಅಂದರೆ ನೀವೇ ಡೌನ್‌ಲೋಡ್ ಮಾಡಿರುವ ಆ್ಯಪ್ ನಿಮ್ಮ ಫೋನ್‌ನಲ್ಲಿ ನೀವು ಎಲ್ಲಿ ಹುಡುಕಾಡಿದ್ದರೂ ಸಿಗುವುದಿಲ್ಲ, ನೀವು ಯಾವ ಫೋಲ್ಡರ್ ಓಪನ್ ಮಾಡಿದರೂ ಆ ಆ್ಯಪ್ ಕಾಣಿಸುವುದೇ ಇಲ್ಲ. ಇದು ಹಿಡನ್ ಆ್ಯಪ್ ಆಗಿರುತ್ತದೆ. ಇದರಿಂದ ಹ್ಯಾಕರ್‌ಗಳು ನಿಮ್ಮ ಫೋನ್‌ನ ಎಲ್ಲಾ ಮಾಹಿತಿ ಪಡೆಯುತ್ತಾರೆ. ಈ ರೀತಿ ಆದಾಗ ನೀವು ಆ್ಯಪ್ ಲಿಸ್ಟ್ ಓಪನ್ ಮಾಡಿ ಸಂದೇಹಾಸ್ಪದ ಆ್ಯಪ್ ಎಂದು ಕಂಡುಬಂದರೆ ಅದನ್ನು ಅನ್‌ಇನ್ಸ್‌ಸ್ಟಾಲ್ ಮಾಡಿ.
ಮೊಬೈಲ್ ಡೇಟಾ ಬೇಗ ಖಾಲಿಯಾದರೆ
ನೀವು ಎಂದಿನಂತೆ ಫೋನ್ ಬಳಸುತ್ತಿದ್ದರೂ ಇತ್ತೀಚಿಗೆ ಬಹುಬೇಗ ಡೇಟಾ ಮುಗಿಯುತ್ತಿದೆ ಎನಿಸಿದರೆ ಎಚ್ಚರವಹಿಸಿ. ಹ್ಯಾಕರ್‌ಗಳು ನಿಮ್ಮ ಫೋನ್ ಡೇಟಾ ಬಳಸಿ ನಿಮ್ಮ ಮಾಹಿತಿ ಕಲೆಹಾಕುತ್ತಿರಬಹುದು. ಅಥವಾ ನಿಮ್ಮ ಅರಿವಿಲ್ಲದೆ ಯಾವುದೋ ಒಂದು ಆ್ಯಪ್ ಸಿಕ್ಕಾಪಟ್ಟೆ ಡೇಟಾವನ್ನು ಬಳಸುತ್ತಿರಬಹುದು. ಈ ಅನುಮಾನ ನಿಮಗೆ ಬಂದರೆ ಡೇಟಾ ಯೂಸೇಜ್‌ನಲ್ಲಿ ಯಾವ ಆ್ಯಪ್ ಹೆಚ್ಚು ಡೇಟಾ ಬಳಸುತ್ತಿದೆ ಎಂಬುದನ್ನು ನೋಡಿ. ಒಂದು ವೇಳೆ ನೀವು ಬಳಸದೇ ಇರದೆ ಆ್ಯಪ್ ಮೇಲಿನ ಸಾಲಿನಲ್ಲಿದ್ದರೆ ನಿಮ್ಮ ಫೋನ್ ಬಹುಶಃ ಹ್ಯಾಕ್ ಆಗಿರಬಹುದು.