ಈಗ ಎಲ್ಲೆಡೆಯೂ ಕೃತಕ ಬುದ್ಧಿಮತ್ತೆಯದೇ ಮಾತು. ಅದರಲ್ಲೂ ಮಾನವ ಬುದ್ಧಿಮತ್ತೆ ಎಲ್ಲೆಲ್ಲಿ ಬಳಕೆಯಲ್ಲಿದೆಯೋ ಅಲ್ಲೆಲ್ಲಾ ಕೃತಕ ಬುದ್ಧಿಮತ್ತೆಯನ್ನು ಅಳವಡಿಸಿಕೊಳ್ಳಬಹುದು ಎಂಬ ವಿಚಾರವು ಕೇವಲ ಕಾಗದದಲ್ಲಿ ಸಿದ್ಧಾಂತದ ಸ್ವರೂಪದಲ್ಲಿ ಇರದೇ ಪ್ರಾಯೋಗಿಕವಾಗಿ ಜಾರಿಗೊಳ್ಳುತ್ತಿದೆ.
ಈ ತಂತ್ರಜ್ಞಾನ ಬಹಳ ಸರಳವಾಗಿ ಅರ್ಥ ಮಾಡಿಕೊಳ್ಳುವಂತಿದೆ. ನೋಟದಲ್ಲಿ ನಿಮ್ಮನ್ನೇ ಹೋಲುವ ರೋಬೋಟ್ ಒಂದಿದೆ ಎಂದು ಭಾವಿಸೋಣ. ಆ ರೋಬೋಟ್ ತನ್ನಲ್ಲಿ ಕೆಲವು ಸಂವೇದಕಗಳನ್ನು ಹೊಂದಿರುತ್ತದೆ. ನಿಮ್ಮ ಬಳಿ ಆ ರೋಬೋಟ್‌ನ ಜೊತೆ ಸಂಪರ್ಕದಲ್ಲಿರಲು ಬ್ಲೂಟೂತ್ ಇತ್ಯಾದಿ ತಂತ್ರಜ್ಞಾನವುಳ್ಳ ಕೆಲವು ಸಂಪರ್ಕ ಸಾಧನಗಳಿರುತ್ತವೆ. ಈ ಸಾಧನಗಳು ನಿಮ್ಮ ದೇಹ ಹಾಗೂ ಮನಸ್ಸಿನ ಜೊತೆಗೂ ಸಂಪರ್ಕ ಹೊಂದಿರುತ್ತವೆ. ಅಲ್ಲದೇ, ನೀವಿರುವ ಜಾಗ ಹಾಗೂ ರೋಬೋಟ್ ಇರುವ ಜಾಗದ ನಡುವೆ ಹಲವು ಕಿಲೋಮೀಟರ್‌ಗಳ ಅಂತರವಿರುತ್ತದೆ. ನೀವು ಅತಿ ದೂರದಲ್ಲಿ ಕುಳಿತು ಮಾತನಾಡಿದರೂ, ಮುಖಭಾವದಲ್ಲಿ ಬದಲಾವಣೆಗಳಾದರೂ, ದೇಹಭಾಷೆಯಲ್ಲಿ ಬದಲಾವಣೆಗಳಾದರೂ ಇನ್ನೊಂದು ತುದಿಯಲ್ಲಿ ಕುಳಿತಿರುವ ರೋಬೋಟ್ ನಿಮ್ಮನ್ನೇ ಸಂಪೂರ್ಣವಾಗಿ ಅನುಕರಿಸುತ್ತದೆ. ಆ ಅನುಕರಣೆಯು ಸಂಪೂರ್ಣ ನಿಮ್ಮನ್ನೇ ಹೋಲುತ್ತಿರುತ್ತದೆ.
ಅಂದರೆ, ಇದು ರೋಬೋಟ್ ಹಾಗೂ ಮನುಷ್ಯ ಸಂಬಂಧದ ಬಗೆಗಿನ ವಿಷಯ. ಈಗಿನ 'ಚಾಟ್ ಜಿಪಿಟಿ' ಹಾಗೂ 'ಬಾರ್ಡ್'ನಂತೆಯೇ ಈ ರೋಬೋಟ್‌ಗಳು ಮಾನವನಿಗೆ ವಿವಿಧ ಹಂತಗಳಲ್ಲಿ ಜೀವನ ನಡೆಸಲು ಸಹಾಯ ಮಾಡುತ್ತವೆ. ವ್ಯಕ್ತಿಯೊಬ್ಬ ದೈಹಿಕವಾಗಿ ಒಂದು ಸ್ಥಳಕ್ಕೆ ಹೋಗಲಾಗದೇ ಇದ್ದರೆ, ತನ್ನ ಬದಲಾಗಿ ತನ್ನನ್ನೇ ಹೋಲುವ ರೋಬೋಟ್ ಒಂದನ್ನು ತನ್ನ ಪ್ರತಿನಿಧಿಯಾಗಿ ಕಳುಹಿಸಬಹುದು. ಈಗಾಗಲೇ ಚಾಲ್ತಿಯಲ್ಲಿರುವ 'ವರ್ಚುಯಲ್ ರಿಯಾಲಿಟಿ' ಕನ್ನಡಕಗಳನ್ನು ಧರಿಸಿದರೆ, ರೋಬೋಟ್ ಕ್ಯಾಮೆರಾದ ಮೂಲಕ ರೋಬೋಟ್ ಎದುರಿನ ದೃಶ್ಯವನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಅಲ್ಲದೇ, ವರ್ಚುಯಲ್ ರಿಯಾಲಿಟಿ ಕನ್ನಡಕವು ವ್ಯಕ್ತಿಗೆ ಸ್ವತಃ ತಾನೇ ಭಾಗವಹಿಸುವಂತೆ ನೈಜತೆಯನ್ನೂ ನೀಡುತ್ತದೆ. ಈ ಕನ್ನಡಕದಲ್ಲಿ ನೋಡಿಕೊಂಡು ವ್ಯಕ್ತಿಯು ಏನನ್ನೇ ಮಾತನಾಡಿದರೂ ದೂರದಲ್ಲಿರುವ ರೋಬೋಟ್ ಆ ವ್ಯಕ್ತಿಯ ಧ್ವನಿಯಲ್ಲಿ ಆ ವ್ಯಕ್ತಿಯಂತೆಯೇ ಯಥಾವತ್ತಾಗಿ ಮಾತನಾಡುತ್ತದೆ. ಅಲ್ಲದೇ, ರೋಬೋಟ್‌ನ ಮುಖದಲ್ಲಿರುವ ಪರದೆಯಲ್ಲಿ ನಿಮ್ಮ ಮುಖದ ದೃಶ್ಯವೂ ಮೂಡುವ ಕಾರಣ, ಇತರರಿಗೆ ಸಹಜತೆಯನ್ನೂ ಸೃಷ್ಟಿಸುತ್ತದೆ.
ಇವೆಲ್ಲವನ್ನೂ ನಾವು ಈಗಾಗಲೇ ಕೆಲವು ವಿಜ್ಞಾನ ಸಿನೆಮಾಗಳಲ್ಲಿ ನೋಡಿದ್ದೇವೆ. ಈ ಕಲ್ಪನೆಯು ನಿಜವಾಗುವ ದಿನಗಳು ಈಗ ಹತ್ತಿರವಾಗುತ್ತಿವೆ ಎಂದು ಕಾರ್ನೆಲ್ ವಿಶ್ವವಿದ್ಯಾನಿಲಯದ ರೋಬಾಟಿಕ್ ವಿಜ್ಞಾನಿ ಮೋಸ್ ಸಕಾಶಿಟ ಹೇಳಿದ್ದಾರೆ. 'ಭವಿಷ್ಯದ ರೋಬೋಟ್‌ಗಳಿಗೆ ಪ್ಲಾಸ್ಟಿಕ್, ಫೈಬರ್ ಅಥವಾ ಲೋಹದ ದೇಹ ಇರುವುದಿಲ್ಲ. ಬದಲಿಗೆ ಕೃತಕ ರಕ್ತ, ಮಾಂಸ, ಚರ್ಮಗಳಿಂದ ತಯಾರಾದ ದೇಹವೇ ಇರಲಿದೆ. ಅಲ್ಲದೇ, ಆ ರೋಬೋಟ್‌ಗಳು ಬೇರೆಡೆ ಇರುವ ವ್ಯಕ್ತಿಗೆ ಸಂಪರ್ಕ ಹೊಂದಿರುತ್ತವೆ. ಹಾಗಾಗಿ, ವ್ಯಕ್ತಿಯೊಬ್ಬ ರೋಬೋಟ್ ಮೂಲಕ ತನ್ನನ್ನು ತಾನು ಅಭಿವ್ಯಕ್ತಿಪಡಿಸುವ ಸಾಧ್ಯತೆ ತೀರಾ ದೂರ ಉಳಿದಿಲ್ಲ' ಎಂದು ಮೋಸ್ ಭವಿಷ್ಯ ನುಡಿದಿದ್ದಾರೆ.
ಈಗಾಗಲೇ ಸಂಶೋಧಿಸಿರುವ ರೋಬೋಟ್‌ಗೆ ವಿಜ್ಞಾನಿಗಳು 'ವಿ-ರಾಕ್ಸಿ' ಎಂದು ಹೆಸರಿಟ್ಟಿದ್ದಾರೆ. ಸದ್ಯಕ್ಕೆ ಈ ರೋಬೋಟ್ ಫೈಬರ್ ಹಾಗೂ ಲೋಹದಿಂದಲೇ ನಿರ್ಮಿಸಲ್ಪಟ್ಟಿದೆ. ರೋಬೋಟ್ ಮುಖದಲ್ಲಿರುವ ಪರದೆಯಲ್ಲಿ ಮನುಷ್ಯನ ಮುಖ ಪ್ರದರ್ಶನಗೊಳ್ಳುತ್ತದೆ. ಅಲ್ಲದೇ, ರೋಬೋಟ್‌ನ ಸ್ಪೀಕರ್‌ನಲ್ಲಿ ಮನುಷ್ಯನ ಧ್ವನಿಯೇ ಬರುತ್ತದೆ. ಫೈಬರ್, ಮಾಂಸ ಹಾಗೂ ಚರ್ಮಗಳನ್ನು ರೋಬೋಟ್‌ಗೆ ನೀಡಲು ಕೆಲವು ಪ್ರಮುಖ ಸಿದ್ಧತೆಗಳು ಆಗಬೇಕಿವೆ. ರಕ್ತ, ಮಾಂಸ, ಸ್ನಾಯುಗಳ ಸ್ಥಾನವನ್ನು ಕೆಲವು ರಾಸಾಯನಿಕಗಳು ಪಡೆಯುವುದು ಸುಲಭವಲ್ಲ. ಏಕೆಂದರೆ, ಅದು ನೈಜತೆಗೆ ಹತ್ತಿರ ಇರಬೇಕು. ಇಲ್ಲವಾದಲ್ಲಿ ಮಾನವನು ರೋಬೋಟ್ ಜೊತೆಗೆ ಸ್ನೇಹಯುತವಾಗಿ ಸಂಪರ್ಕ ಬೆಳೆಸದೇ ಭಯ ಹಾಗೂ ಎಚ್ಚರಿಕೆ ಅದರ ಸ್ಥಾನವನ್ನು ತುಂಬುತ್ತವೆ ಎಂದು ಮೋಸ್ ಹೇಳಿದ್ದಾರೆ.
ಎಲ್ಲೆಲ್ಲಿ ಇದರ ಬಳಕೆ?:
ನಿತ್ಯದ ಜೀವನದಿಂದ ಹಿಡಿದು ಅತಿ ಕ್ಲಿಷ್ಟಕರ ವಾತಾವರಣಗಳಲ್ಲಿ ಕಾರ್ಯನಿರ್ವಹಿಸುವ ಸಂದರ್ಭಗಳಲ್ಲಿ ಈ ರೋಬೋಟ್ ಕೆಲಸಕ್ಕೆ ಬರಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ನಾಗರಿಕಜೀವನದಲ್ಲಿ, ಅಂದರೆ, ಕಚೇರಿಯ ಕೆಲಸಗಳಲ್ಲಿ ಕಾನೂನು ಅನುಮತಿ ನೀಡಿದರೆ, ಮಾನವನ ಬದಲಿಗೆ ರೋಬೋಟ್‌ಗಳೇ ಪ್ರತಿನಿಧಿಸಬಹುದು. ಕ್ಲಿಷ್ಟಕರ ಸನ್ನಿವೇಶಗಳಲ್ಲಿ ಅಂದರೆ, ಮಾನವನ ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರುವ, ಅಂದರೆ ಪ್ರಯೋಗಾಲಯಗಳಲ್ಲಿ, ಕಾರ್ಖಾನೆಗಳಲ್ಲಿ, ಗಣಿಗಳಲ್ಲಿ ರೋಬೋಟ್ ದಣಿವಿಲ್ಲದೇ ಮನುಷ್ಯನನ್ನು ಪ್ರತಿನಿಧಿಸಬಲ್ಲದು. ಅಲ್ಲದೇ, ಬಾಹ್ಯಾಕಾಶ ಸಂಶೋಧನೆಗೂ ಇದು ಮಹತ್ವದ ಕಾಣಿಕೆ ನೀಡಲಿದೆ. ಅಂದರೆ, ಗಗನಯಾತ್ರಿಗಳಾಗಿ ಮಾನವರೇ ಹೋಗುವ ಬದಲು ಗಗನಯಾತ್ರಿಗಳ ಪ್ರತಿನಿಧಿಗಳಾಗಿ ರೋಬೋಟ್‌ಗಳು ಬಾಹ್ಯಾಕಾಶಕ್ಕೆ ಹೋಗಬಹುದು. ಮಾನವರು ಭೂಮಿಯ ಮೇಲೇ ಕುಳಿತು ರೋಬೋಟ್‌ನ ಮೂಲಕ ಯಾವ ಕೆಲಸವನ್ನು ಬೇಕಾದರೂ ಮಾಡಿಸಿಕೊಳ್ಳಬಹುದು.
ಈ ತಂತ್ರಜ್ಞಾನವು ಅತಿ ಮೂಲಸ್ವರೂಪದಲ್ಲಷ್ಟೆ ಈಗ ಜಾರಿಯಾಗಿದೆ. ಮೋಸ್ ಅವರ ಪ್ರಕಾರ ಕನಿಷ್ಠವೆಂದರೂ ಹತ್ತು ವರ್ಷಗಳಲ್ಲಿ ಮಾನವನನ್ನೇ ಸಂಪೂರ್ಣವಾಗಿ ದೈಹಿಕವಾಗಿ ಹೋಲುವ ರೋಬೋಟ್‌ಗಳು ನಮ್ಮ ನಡುವೆ ಇರಲಿವೆ. ಅಂದು ಮಾನವನ ಬಹುತೇಕ ಎಲ್ಲ ಕಾರ್ಯಗಳೂ ರೋಬೋಟ್‌ಗಳ ಮೂಲಕವೇ ನಡೆಸುವ ಸಾಧ್ಯತೆ ಬೆಳೆದಿರುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.