ಮುಳ್ಳೇರಿಯ: ಯಕ್ಷಗಾನ ಕಲಾಕ್ಷೇತ್ರದಲ್ಲಿ ಗುರುಕುಲವನ್ನು ಸ್ಥಾಪಿಸುವುದರ ಮೂಲಕ ಅನೇಕ ಮಂದಿ ಶಿಷ್ಯರನ್ನು ತಯಾರು ಮಾಡಿದ, ಪ್ರಸಂಗ ಕರ್ತೃವಾಗಿಯೂ ಅದ್ವೀತಿಯವಾದ ಸಾಧನೆಯನ್ನು ಮಾಡಿದ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರು ಒಬ್ಬ ಅನನ್ಯ ಕಲಾರಾಧಕರಾದ್ದರಿಂದಲೇ ಅವರು ಹುಟ್ಟುಹಾಕಿದ ಈ ಸಂಘ ಇಷ್ಟು ದೀರ್ಘ ಕಾಲ ಸಕ್ರಿಯವಾಗಿ ಕಲಾಸೇವೆಯಲ್ಲಿ ನಿರತವಾಗಿರುವುದಕ್ಕೆ ಸಾಧ್ಯವಾಯಿತು ಎಂದು ಎಡನೀರು ಮಠದ ಕಾರ್ಯನಿರ್ವಹಣಾಧಿಕಾರಿ, ನಿವೃತ್ತ ಪ್ರಾಂಶುಪಾಲ ರಾಜೇಂದ್ರ ಕಲ್ಲೂರಾಯ ಎಡನೀರು ಅಭಿಪ್ರಾಯ ವ್ಯಕ್ತಗೊಳಿಸಿದರು.
ಅವರು ಬನಾರಿ ಶ್ರೀ ಗೋಪಾಲಕೃಷ್ಣ ಕಲಾಸಂಘದ 79 ನೇ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಿರಿಯ ಕವಯಿತ್ರಿ ಸತ್ಯವತಿ ಎಸ್. ಭಟ್ ಕೊಳಚಿಪ್ಪು ಅವರು ಕೀರಿಕ್ಕಾಡು ಸಂಸ್ಮರಣೆಯನ್ನು ಮಾಡಿದರು.
ಕಲಾವಿದರು ಸಮಾಜದ ಸಂಪತ್ತು : ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ
ಅದೇ ಸಂದರ್ಭದಲ್ಲಿ ಹಿರಿಯ ಮದ್ದಳೆಗಾರರಾದÀ ಪದ್ಯಾಣ ಶಂಕರನಾರಾಯಣ ಭಟ್ಟ ಅವರನ್ನು ಕೀರಿಕ್ಕಾಡು ಪ್ರಶಸ್ತಿಯನ್ನಿತ್ತು ಗೌರವಿಸಲಾಯಿತು. ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿಯವರು ಅಭಿನಂದನಾ ನುಡಿಗಳನ್ನಾಡಿದರು. ಪದ್ಯಾಣದವರೊಂದಿಗೆ ಇದ್ದ ಸುದೀರ್ಘಕಾಲದ ಒಡನಾಟವನ್ನು ಸ್ಮರಿಸಿಕೊಂಡರು. ಚೆಂಡೆ, ಮದ್ದಳೆಯಲ್ಲಿ ಅವರು ತೋರಿಸುವ ಕೈಚಳಕವನ್ನು ಸೋದಾಹರಣವಾಗಿ ಉಲ್ಲೇಖಿಸಿದರು. ಪದ್ಯಾಣದಂಥವರು ಕೇವಲ ಒಂದು ಕುಟುಂಬಕ್ಕೆ ಅಥವಾ ಒಂದು ವರ್ಗಕ್ಕೆ ಸೀಮಿತರಾದ ಕಲಾವಿದರಲ್ಲ. ಅವರು ಇಡೀ ಸಮಾಜಕ್ಕೆ ಸಂಪತ್ತಾಗಿ ಪರಿಣಮಿಸಿದ ಕಲಾವಿದರು ಎಂದು ಹೇಳಿದರು.
ಪ್ರಶಸ್ತಿ ಸ್ವೀಕರಿಸಿದ ಪದ್ಯಾಣ ಅವರು, ಒಬ್ಬ ಮಹಾನ್ ಕಲಾವಿದನ ಹೆಸರಿನಲ್ಲಿ ಇರುವ ಈ ಪ್ರಶಸ್ತಿಯನ್ನು ಪಡೆಯುವುದು ನನ್ನ ಬದುಕಿನ ಪುಣ್ಯದ ಫಲ ಎಂದು ಧನ್ಯತೆಯನ್ನು ವ್ಯಕ್ತಪಡಿಸಿದರು. ಸಂಘದ ಅಧ್ಯಕ್ಷ, ಸಾಹಿತಿ, ಅರ್ಥಧಾರಿ ಡಾ.ರಮಾನಂದ ಬನಾರಿ ಸ್ವಾಗತಿಸಿ, ರಾಮಣ್ಣ ಮಾಸ್ತರ್ ವಂದಿಸಿದರು.ನಾರಾಯಣ ದೇಲಂಪಾಡಿ ನಿರ್ವಹಿಸಿದರು.