HEALTH TIPS

ಮಾನವ ಕಳ್ಳಸಾಗಣೆ ಶಂಕೆ: ಫ್ರಾನ್ಸ್‌ ವಶದಲ್ಲಿ ವಿಮಾನ, ಪ್ರಯಾಣಿಕರ ವಿಚಾರಣೆ

               ಪ್ಯಾರಿಸ್‌: ಮಾನವ ಕಳ್ಳಸಾಗಣೆ ಶಂಕೆಯಲ್ಲಿ ಫ್ರಾನ್ಸ್‌ನ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿರುವ ವಿಮಾನದಲ್ಲಿದ್ದ ಭಾರತದ ಪ್ರಯಾಣಿಕರ ಜತೆ ಸಂಪರ್ಕದಲ್ಲಿರುವುದಾಗಿ ಇಲ್ಲಿನ ಭಾರತ ರಾಯಭಾರ ಕಚೇರಿ ಶನಿವಾರ ಹೇಳಿದೆ.

           ದುಬೈನಿಂದ ನಿಕರಾಗುವಾಗೆ ತೆರಳುತ್ತಿದ್ದ ವಿಮಾನವನ್ನು ಮಾನವ ಕಳ್ಳಸಾಗಣೆ ಶಂಕೆಯ ಮೇರೆಗೆ ಫ್ರಾನ್ಸ್‌ನ ಅಧಿಕಾರಿಗಳು ಗುರುವಾರ ತುರ್ತು ಭೂಸ್ಪರ್ಶ ಮಾಡಿಸಿದ್ದರು.

             ಪ್ಯಾರಿಸ್‌ನ ಪೂರ್ವಕ್ಕೆ 150 ಕಿ.ಮೀ. ದೂರದಲ್ಲಿರುವ ವಾಟ್ರಿ ನಿಲ್ದಾಣದಲ್ಲಿ ಇಳಿದ ವಿಮಾನದಲ್ಲಿದ್ದ 303 ಪ್ರಯಾಣಿಕರಲ್ಲಿ ಹೆಚ್ಚಿನವರು ಭಾರತದವರು.

               'ವಾಟ್ರಿ ನಿಲ್ದಾಣದಲ್ಲಿ ಇಳಿದ ವಿಮಾನವನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಫ್ರಾನ್ಸ್‌ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಾನ್ಸುಲ್ ಕಚೇರಿಯ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದು, ಪ್ರಯಾಣಿಕರ ಯೋಗ-ಕ್ಷೇಮದ ಬಗ್ಗೆ ಗಮನ ಹರಿಸಿದ್ದಾರೆ' ಎಂದು ಭಾರತ ರಾಯಭಾರ ಕಚೇರಿ ತನ್ನ 'ಎಕ್ಸ್' ಖಾತೆಯಲ್ಲಿ ತಿಳಿಸಿದೆ.

                 ಇಬ್ಬರ ವಿಚಾರಣೆ: 'ಫ್ರಾನ್ಸ್‌ನ ಸಂಘಟಿತ ಅಪರಾಧ ತಡೆ ಘಟಕವು ತನಿಖೆಯನ್ನು ಕೈಗೆತ್ತಿಕೊಂಡಿದೆ. ವಿಶೇಷ ತನಿಖಾ ತಂಡದ ಅಧಿಕಾರಿಗಳು ಎಲ್ಲ ಪ್ರಯಾಣಿಕರನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ.

              ಹೆಚ್ಚಿನ ವಿಚಾರಣೆಗಾಗಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ' ಎಂದು ಪ್ಯಾರಿಸ್‌ ಪ್ರಾಸಿಕ್ಯೂಟರ್‌ ಕಚೇರಿಯ ಪ್ರಕಟಣೆ ತಿಳಿಸಿದೆ.

             'ವಿಮಾನದಲ್ಲಿ 21 ತಿಂಗಳ ಮಗುವಿನಿಂದ ಹಿಡಿದು 17 ವರ್ಷದವರೆಗಿನ ಹಲವು ಅಪ್ರಾಪ್ತ ವಯಸ್ಸಿನವರೂ ಇದ್ದರು. ಅವರಲ್ಲಿ 13 ಮಕ್ಕಳ ಜತೆ ಪೋಷಕರು ಇರಲಿಲ್ಲ' ಎಂದು ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ 'ಲಿ ಮಾಂಡ್' ದಿನಪತ್ರಿಕೆ ವರದಿ ಮಾಡಿದೆ.

              'ಯುಎಇನಲ್ಲಿ ಕೆಲಸ ಮಾಡುತ್ತಿದ್ದ ಭಾರತದ ಪ್ರಜೆಗಳನ್ನು ನಿಕರಾಗುವಾಗೆ ಕರೆದೊಯ್ಯಲಾಗುತ್ತಿತ್ತು. ಮಾನವ ಕಳ್ಳಸಾಗಣೆಯ ಸುಳಿವು ಸಿಕ್ಕಿದ್ದರಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆ. ನಿಕರಾಗುವಾಗೆ ತ‍ಲುಪಿದ ಬಳಿಕ ಅಲ್ಲಿಂದ ಅಮೆರಿಕ ಅಥವಾ ಕೆನಡಾಗೆ ಅಕ್ರಮವಾಗಿ ಪ್ರವೇಶಿಸುವ ಉದ್ದೇಶವನ್ನು ಪ್ರಯಾಣಿಕರು ಹೊಂದಿದ್ದರು ಎಂದು ಅಧಿಕಾರಿಗಳು ಶಂಕಿಸಿದ್ದಾರೆ' ಎಂದು ಪತ್ರಿಕೆಯ ವರದಿ ತಿಳಿಸಿದೆ.

            ರೊಮೇನಿಯದ ಲೆಜೆಂಡ್ಸ್‌ ಏರ್‌ಲೈನ್ಸ್‌ ಸಂಸ್ಥೆಗೆ ಸೇರಿದ ವಿಮಾನದ 15 ಸಿಬ್ಬಂದಿಯನ್ನು ವಿಚಾರಣೆ ಬಳಿಕ ಬಿಟ್ಟುಬಿಡಲಾಗಿದೆ ಎಂದು ಮೂಲಗಳು ಹೇಳಿವೆ.

                 ವಾಸ್ತವ್ಯಕ್ಕೆ ನಿಲ್ದಾಣದಲ್ಲೇ ವ್ಯವಸ್ಥೆ: 'ಫ್ರಾನ್ಸ್‌ನಲ್ಲಿ ವಿಮಾನ ಇಳಿದ ಬಳಿಕ ಪ್ರಯಾಣಿಕರನ್ನು ಕೆಲ ಸಮಯ ವಿಮಾನದಲ್ಲೇ ಇರಿಸಲಾಗಿತ್ತು. ಆ ಬಳಿಕ ಅವರಿಗೆ ಹೊರಗೆ ಬರಲು ಅವಕಾಶ ನೀಡಲಾಯಿತು. ನಿಲ್ದಾಣದ ಟರ್ಮಿನಲ್‌ನ ಕಟ್ಟಡದಲ್ಲಿ ವಾಸ್ತವ್ಯಕ್ಕೆ ಎಲ್ಲರಿಗೂ ಹಾಸಿಗೆ ಹಾಗೂ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ನಿಲ್ದಾಣದ ಬಳಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ' ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries